ದುಬೈ: ಅವಕಾಶವಿದ್ದರೂ ಆರ್ ಸಿಬಿ ಬ್ಯಾಟ್ಸ್ ಮನ್ ಏರಾನ್ ಫಿಂಚ್ ರನ್ನು ಔಟ್ ಮಾಡದೇ ಇರುವುದಕ್ಕೆ ನಿಜ ಕಾರಣವೇನೆಂದು ರವಿಚಂದ್ರನ್ ಅಶ್ವಿನ್ ವಿವರಿಸಿದ್ದಾರೆ.
ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬೌಲರ್ ಅಶ್ವಿನ್ ಆರ್ ಸಿಬಿ ಆರಂಭಿಕ ಏರಾನ್ ಫಿಂಚ್ ರನ್ನು ಮಂಕಡ್ ಔಟ್ ಮಾಡುವುದಾಗಿ ಎಚ್ಚರಿಕೆ ನೀಡಿ ಸುಮ್ಮನಾಗಿದ್ದರು. ಬಳಿಕ ಟ್ವಿಟರ್ ಮೂಲಕ ಬಾಲ್ ಎಸೆಯುವ ಮೊದಲೇ ಕ್ರೀಸ್ ಬಿಡುವ ಬ್ಯಾಟ್ಸ್ ಮನ್ ಗಳಿಗೆ ಎಚ್ಚರಿಕೆ ನೀಡಿದ್ದರು.
ಇದರ ಬಗ್ಗೆ ಪ್ರತಿಕ್ರಿಯಿಸಿರುವ ಅವರು ‘ಏರಾನ್ ನನಗೆ ಪಂಜಾಬ್ ತಂಡದಲ್ಲಿದ್ದಾಗಲೇ ಗೊತ್ತು. ಆತ ನನಗೆ ಒಳ್ಳೆಯ ಸ್ನೇಹಿತ. ನಾನು ಚೆಂಡು ಹಿಡಿದು ಎಚ್ಚರಿಕೆ ನೀಡುವಾಗ ನನ್ನ ಕಡೆಗೆ ದಿಟ್ಟಿಸಿ ನೋಡುತ್ತಿದ್ದೆ. ನನಗೆ ಸುಮ್ಮನೇ ಈ ವಿಚಾರವಾಗಿ ವಿವಾದ ಮಾಡುವುದು ಬೇಡವೆನಿಸಿತು. ಆದರೆ ಕೋಚ್ ರಿಕಿ ಪಾಂಟಿಂಗ್ ಕೂಡಾ ಮಂಕಡ್ ಔಟ್ ಮಾಡಲು ಬೆಂಬಲಿಸಿದ್ದರು. ಆದರೆ ಐಸಿಸಿ ಈ ರೀತಿ ಮುಂದೆ ಬರುವ ಬ್ಯಾಟ್ಸ್ ಮನ್ ಗಳಿಗೆ ಔಟ್ ನೀಡುವ ಬದಲು ಬೇರೆ ಶಿಕ್ಷೆ ನೀಡುವುದು ಉತ್ತಮ’ ಎಂದು ಅಶ್ವಿನ್ ಹೇಳಿದ್ದಾರೆ.