ಅಹಮದಾಬಾದ್‌: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 23ನೇ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ ವಿರುದ್ಧ 58 ರನ್‌ಗಳಿಂದ ಸೋತ ರಾಜಸ್ಥಾನ ರಾಯಲ್ಸ್‌ ತಂಡದ ನಾಯಕ ಸಂಜು ಸ್ಯಾಮ್ಸನ್‌ಗೆ ಡಬಲ್‌ ಶಾಕ್‌ ಎದುರಾಗಿದೆ.ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಗುಜರಾತ್‌ ಟೈಟಾನ್ಸ್‌ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ಸೋಲು ಕಂಡಿತು. ಈ ಬೆನ್ನಲ್ಲೇ ಸಂಜು ಸ್ಯಾಮ್ಸನ್‌ ಅವರಿಗೆ ₹ 24 ಲಕ್ಷ ದಂಡ ವಿಧಿಸಲಾಗಿದೆ.ಟೈಟನ್ಸ್‌ ವಿರುದ್ಧ ಪಂದ್ಯದಲ್ಲಿ ನಿಧಾನಗತಿಯ ಓವರ್‌ ರೇಟ್‌ ಕಾಯ್ದುಕೊಂಡಿದ್ದಕ್ಕಾಗಿ ರಾಜಸ್ಥಾನ್‌ ರಾಯಲ್ಸ್‌ ತಂಡದ ನಾಯಕ ಸಂಜು ಸ್ಯಾಮ್ಸನ್‌ಗೆ 24 ಲಕ್ಷ ರೂ. ದಂಡ ವಿಧಿಸಲಾಗಿದೆ. ಪ್ರಸಕ್ತ ಆವೃತ್ತಿಯಲ್ಲಿ ಸ್ಲೋ ಓವರ್‌ ರೇಟ್‌ಗಾ ಆರ್‌ಆರ್‌ಗೆ 2ನೇ ಬಾರಿ ದಂಡ ವಿಧಿಸಲಾಗಿದೆ. ಇನ್ನೊಂದು ಪಂದ್ಯದಲ್ಲಿ ಈ ಘಟನೆ ಮರುಕಳಿಸಿದ್ರೆ ಸ್ಯಾಮ್ಸನ್‌ ಒಂದು ಪಂದ್ಯದಿಂದ ಬ್ಯಾನ್‌ ಆಗಲಿದ್ದಾರೆ.

ನವದೆಹಲಿ: 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಕೊನೆಗೂ ಕ್ರಿಕೆಟ್‌ಗೆ ಮಾನ್ಯತೆ ನೀಡಲಾಗಿದೆ. ಆದರೆ, ಆರು ತಂಡಗಳಿಗೆ ಮಾತ್ರ ಪ್ರವೇಶದ ಅವಕಾಶ ನೀಡಲಾಗಿದೆ.128 ವರ್ಷಗಳ ನಂತರ 2028ರ ಲಾಸ್ ಏಂಜಲೀಸ್ ಕೂಟ ಮೂಲಕ ಒಲಿಂಪಿಕ್ಸ್‌ಗೆ ಕ್ರಿಕೆಟ್ ಮರಳುತ್ತಿದೆ. ಪ್ಯಾರಿಸ್‌ನಲ್ಲಿ ನಡೆದ 1900ರ ಕ್ರೀಡಾಕೂಟದಲ್ಲಿ ಕ್ರಿಕೆಟ್ ಕೊನೆಯ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಕಾಣಿಸಿಕೊಂಡಿತ್ತು. ಅಲ್ಲಿ ಗ್ರೇಟ್ ಬ್ರಿಟನ್ ಮತ್ತು ಫ್ರಾನ್ಸ್ ನಡುವೆ ಎರಡು ದಿನಗಳ ಪಂದ್ಯವನ್ನು ನಡೆಸಲಾಗಿತ್ತು.ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಟಿ20 ಸ್ವರೂಪದಲ್ಲಿ ಕ್ರಿಕೆಟ್‌ ಅನ್ನು ಪರಿಚಯಿಸಲಾಗುತ್ತಿದೆ. ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ತಲಾ 6 ತಂಡಗಳು ಸ್ಪರ್ಧಿಸುತ್ತವೆ ಎಂದು ಕೂಟದ ಆಯೋಜಕರು ದೃಢಪಡಿಸಿದ್ದಾರೆ.

ಅಹಮದಾಬಾದ್‌: ಸಾಯಿ ಸುದರ್ಶನ್‌ ಅವರ ಅಮೋಘ ಬ್ಯಾಟಿಂಗ್‌ ಬಳಿಕ ಕನ್ನಡಿಗ ಪ್ರಸಿದ್ಧ ಕೃಷ್ಣ ಅವರ ಪರಿಣಾಮಕಾರಿ ಬೌಲಿಂಗ್‌ ದಾಳಿಯ ನೆರವಿನಿಂದ ಆತಿಥೇಯ ಗುಜರಾತ್‌ ಟೈಟನ್ಸ್‌ ತಂಡವು ಬುಧವಾರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಪಂದ್ಯದಲ್ಲಿ 58 ರನ್‌ಗಳಿಂದ ರಾಜಸ್ಥಾನ ರಾಯಲ್ಸ್‌ ತಂಡವನ್ನು ಮಣಿಸಿತು.ಮೊದಲ ಪಂದ್ಯ ಸೋತು ಸತತ ನಾಲ್ಕು ಪಂದ್ಯಗಳನ್ನು ಗೆದ್ದ ಗುಜರಾತ್‌ ತಂಡವು 8 ಅಂಕಗಳೊಂದಿಗೆ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿತು. ಮತ್ತೊಂದೆಡೆ ರಾಜಸ್ಥಾನ ರಾಯಲ್ಸ್‌ ಐದು ಪಂದ್ಯಗಳಲ್ಲಿ ಮೂರರಲ್ಲಿ ಸೋತು ಏಳನೇ ಸ್ಥಾನಕ್ಕೆ ಕುಸಿದಿದೆ.ಟಾಸ್‌ ಗೆದ್ದ ರಾಜಸ್ಥಾನ ರಾಯಲ್ಸ್‌ ತಂಡದ ನಾಯಕ ಸಂಜು ಸ್ಯಾಮ್ಸನ್‌ ಫೀಲ್ಡಿಂಗ್‌ ಆಯ್ಡುಕೊಂಡರು. ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್ ತಂಡವು 20 ಓವರ್‌ಗಳಲ್ಲಿ ಆರು ವಿಕೆಟ್‌ಗೆ 217 ರನ್‌ ಗಳಿಸಿತು.

ಹೈದರಾಬಾದ್‌: ಸಿಂಗಾಪುರದಲ್ಲಿ ಮಂಗಳವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ಗಂಭೀರ ಗಾಯಗೊಂಡಿರುವ ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ, ಟಾಲಿವುಡ್‌ ಸೂಪರ್‌ ಸ್ಟಾರ್‌ ಪವನ್ ಕಲ್ಯಾಣ್ ಪುತ್ರ ಮಾರ್ಕ್ ಶಂಕರ್‌ ಚೇತರಿಸಿಕೊಳ್ಳುತ್ತಿದ್ದಾನೆ.ಅಗ್ನಿ ಅವಘಡದಲ್ಲಿ ಆಂಧ್ರ ಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಪುತ್ರ ಮಾರ್ಕ್ ಶಂಕರ್‌ಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಿಂಗಾಪುರಕ್ಕೆ ತೆರಳುವ ಮುನ್ನ ಪುತ್ರನ ಆರೋಗ್ಯದ ಅಪ್‌ಡೇಟ್‌ ಅನ್ನು ಪವನ್ ಕಲ್ಯಾಣ್ ಮಾಧ್ಯಮಕ್ಕೆ ನೀಡಿದರು. ಸಹೋದರ ಮೆಗಾಸ್ಟಾರ್ ಚಿರಂಜೀವಿ ದಂಪತಿ ಜೊತೆ ಪವನ್ ಕಲ್ಯಾಣ್ ಸಿಂಗಾಪುರಕ್ಕೆ ತೆರಳಿದ್ದಾರೆ. ಮಾರ್ಕ್ ಶಂಕರ್ ಶಾಲೆಯ ಸಮ್ಮರ್ ಕ್ಯಾಂಪ್‌ಗೆ ಭಾಗಿಯಾಗಿದ್ದು, ಈ ವೇಳೆ ಬೆಂಕಿ ಅವಘಡ ಸಂಭವಿಸಿದೆ. ಪುತ್ರನೊಂದಿಗೆ ಇತರೆ ವಿದ್ಯಾರ್ಥಿಗಳು ಸಹ ಇದ್ದರು.

ಬೆಂಗಳೂರು: ಕರ್ನಾಟಕದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಭ್ರಷ್ಟಾಚಾರ ಕಡಿಮೆಯಾಗುತ್ತಿಲ್ಲ. ಭ್ರಷ್ಟಾಚಾರದಲ್ಲಿ ಕರ್ನಾಟಕವೇ ನಂಬರ್‌ ಒನ್‌ ಸ್ಥಾನದಲ್ಲಿದೆ. ಮುಖ್ಯಮಂತ್ರಿ ಏನೇ ಹೇಳಿದರೂ ಭ್ರಷ್ಟಾಚಾರ ಕುರಿತು ನನ್ನ ಅಭಿಪ್ರಾಯ ಇದೇ ಇರುತ್ತದೆ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರೂ ಆಗಿರುವ ಕಾಂಗ್ರೆಸ್‌ ಶಾಸಕ ಬಸವರಾಜ ರಾಯರಡ್ಡಿ ಅವರು ಸ್ವಪಕ್ಷದ ವಿರುದ್ಧವೇ ಬಾಂಬ್‌ ಸಿಡಿಸಿದ್ದಾರೆ.ಯಾವುದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದರೂ ವ್ಯಾಪಕ ಭ್ರಷ್ಟಾಚಾರ ನಡೆಯುತ್ತದೆ. ಭ್ರಷ್ಟಾಚಾರ ವ್ಯಾಪಕವಾಗಿರುವುದರಿಂದಲೇ ಗುಣಮಟ್ಟದ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಹಿಂದೆಲ್ಲ ಐದಾರು ದಶಕ ಬಾಳಿಕೆ ಬರುತ್ತಿದ್ದ ಸರ್ಕಾರಿ ಕಟ್ಟಡಗಳು ಹತ್ತು ವರ್ಷಗಳಲ್ಲಿಯೇ ಬಿದ್ದು ಹೋಗುತ್ತಿವೆ. ಅದರಲ್ಲೂ ಕಲ್ಯಾಣ ಕರ್ನಾಟಕದಲ್ಲಿ ಭ್ರಷ್ಟಾಚಾರ ಹೆಚ್ಚು ತಾಂಡವಾಗುತ್ತಿದೆ ಎಂದು ಯಲಬುರ್ಗಾ ಶಾಸಕರೂ ಆಗಿರುವ ರಾಯರಡ್ಡಿ ಕಿಡಿಕಾಡಿದರು.