Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ತೃತೀಯ ಟಿ20 ಪಂದ್ಯವನ್ನು ಇಂಗ್ಲೆಂಡ್ 8 ವಿಕೆಟ್ ಗಳಿಂದ ಗೆದ್ದು ಕೊಂಡಿದೆ. ಇದರೊಂದಿಗೆ ಸರಣಿಯಲ್ಲಿ 2-1 ರಿಂದ ಮುನ್ನಡೆ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಗೆ ಬ್ಯಾಟ್ಸ್ ಮನ್ ಗಳು ಕೈಕೊಟ್ಟರು. ಆರಂಭಿಕ ಕೆಎಲ್ ರಾಹುಲ್ ಗೆ ಮತ್ತೊಂದು ಅವಕಾಶ ನೀಡಲಾಯಿತಾದರೂ ಅದನ್ನು ಅವರು ಬಳಸಿಕೊಳ್ಳುವಲ್ಲಿ ಸಂಪೂರ್ಣ ವಿಫಲರಾದರು. ಮತ್ತೆ ಶೂನ್ಯಕ್ಕೆ ನಿರ್ಗಮಿಸಿದರು. ಹಿಟ್ ಮ್ಯಾನ್ ರೋಹಿತ್ ಶರ್ಮಾ ತಮ್ಮ ಖ್ಯಾತಿಗೆ ತಕ್ಕ ಆಟವಾಡಲಿಲ್ಲ. ಅವರ ಕೊಡುಗೆ ಕೇವಲ 17 ರನ್.
ಕಳೆದ ಪಂದ್ಯದ ಹೀರೋ ಇಶಾನ್ ಕಿಶನ್ ಕೇವಲ 4 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಇದಾದ ಬಳಿಕ ನಾಯಕನ ಆಟವಾಡಿದ ವಿರಾಟ್ ಕೊಹ್ಲಿ 46 ಎಸೆತಗಳಿಂದ 77 ರನ್ ಗಳಿಸಿ ಅಜೇಯರಾಗುಳಿದರು. ಕೊಹ್ಲಿಯ ಅಬ್ಬರದ ಆಟದಿಂದಾಗಿ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಲು ಶಕ್ತವಾಯಿತು.
ಈ ಮೊತ್ತವನ್ನು ಆತ್ಮವಿಶ್ವಾಸದಿಂದಲೇ ಬೆನ್ನತ್ತಿದ ಇಂಗ್ಲೆಂಡ್ 18.2 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು158 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು. ಇಂಗ್ಲೆಂಡ್ ಪರ ಅಬ್ಬರದ ಆಟವಾಡಿದ ಆರಂಭಿಕ ಜೋಸ್ ಬಟ್ಲರ್ ಅಜೇಯ 82 ರನ್ ಗಳಿಸಿದರು. ಜಾನಿ ಬೇರ್ ಸ್ಟೋ 40 ರನ್ ಗಳಿಸಿದರು.