Publish Date: Sat, 01 Aug 2020 (10:18 IST)
Updated Date: Sat, 01 Aug 2020 (10:20 IST)
ಬೆಂಗಳೂರು : ಕೆಲವು ಮಕ್ಕಳು ಮೊಟ್ಟೆ ತಿನ್ನಲು ಇಷ್ಟಪಡುವುದಿಲ್ಲ. ಅಂತಹ ಮಕ್ಕಳಿಗೆ ಈ ಮೊಟ್ಟೆ ಶಾಮಿಗೆ ಬಾತ್ ಮಾಡಿಕೊಡಿ. ಇದು ಬಹು ಬೇಗನೆ, ತುಂಬಾ ಸುಲಭವಾಗಿ ಮಾಡಬಹುದಾದಂತಹ ಒಂದು ತಿಂಡಿ.
ಬೇಕಾಗುವ ಸಾಮಾಗ್ರಿಗಳು : ಮೊಟ್ಟೆ 2 (ಅದರಲ್ಲಿ ಹಳದಿ ಭಾಗವನ್ನು ಮಾತ್ರ ತೆಗೆದುಕೊಳ್ಳಿ), ಶಾವಿಗೆ 500ಗ್ರಾಂ, ಸಣ್ಣದಾಗಿ ಹೆಚ್ಚಿದ ಈರುಳ್ಳಿ 2, ದನಿಯಾ 1 ಟೀ ಸ್ಪೂನ್, ಜೀರಿಗೆ 1 ಟೀ ಸ್ಪೂನ್, ಕೆಂಪು ಮೆಣಸಿನ ಕಾಯಿ 2, ದಾಲ್ಚಿನ್ನಿ 1, ಏಲಕ್ಕಿ 2, ಎಣ್ಣೆ ಅಥವಾ ತುಪ್ಪ ಹುರಿಯಲು ಬೇಕಾಗುವಷ್ಟು, ನೀರು 1 ಕಪ್, ಸಾಸಿವೆ 1 ಚಮಚ, ಕಡಲೇಬೇಳೆ 2 ಚಮಚ, ಕರಿಬೇವು ಸ್ವಲ್ಪ, ಬೆಣ್ಣೆ 3 ಟೀ ಸ್ಪೂನ್, ರುಚಿಗೆ ಬೇಕಾಗುವಷ್ಟು ಉಪ್ಪು.
ಮಾಡುವ ವಿಧಾನ : ದನಿಯಾ, ಜೀರಿಗೆ, ಕೆಂಪು ಮೆಣಸಿನ ಕಾಯಿ , ಏಲಕ್ಕಿ, ದಾಲ್ಚಿನ್ನಿ ಇವೆಲ್ಲವನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಿ. ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಅಥವಾ ತುಪ್ಪ ಹಾಕಿ ಶಾವಿಗೆಯನ್ನು ಹುರಿಯಿರಿ. ಆಮೇಲೆ ಸಾಸಿವೆ, ಕಡಲೇಬೇಳೆ, ಕರಿಬೇವು, ಮೊಟ್ಟೆಯ ಹಳದಿ ಭಾಗ ಹಾಗೂ ರೆಡಿಮಾಡಿಕೊಂಡ ಪುಡಿ ಇವೆಲ್ಲವನ್ನು ಒಟ್ಟಿಗೆ ಸೇರಿಸಿ ಚೆನ್ನಾಗಿ ಕಲಸಿ. ನಂತರ ಈ ಮಿಶ್ರಣಕ್ಕೆ ನೀರು ಸೇರಿಸಿ ಕುದಿಸಿ. ನೀರು ಕುದಿದ ತಕ್ಷಣ ಶಾವಿಗೆ ಹಾಕಿ ಮಿಕ್ಸ್ ಮಾಡಿ. ನೀರು ಪೂರ್ತಿ ಆವಿಯಾಗುವವರೆಗೂ ಅದನ್ನು ಬೇಯಿಸಿದರೆ ಸಾಕು. ಈಗ ಬಿಸಿಬಿಸಿಯಾದ ಮೊಟ್ಟೆ ಶಾಮಿಗೆ ಬಾತ್ ರೆಡಿ.