Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಜುಲೈ 23ರಂದು ಬಂಗಾಳ ಉಪಸಾಗರದ ವಾಯುವ್ಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗುವ ಹೆಚ್ಚಿನ ಸಾಧ್ಯತೆಯಿದೆ. ಇದರ ಪ್ರಭಾವದಿಂದ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಎಲ್ಲ ಸ್ಥಳಗಳಲ್ಲಿ ಜುಲೈ 25ರವರೆಗೆ ಭಾರಿ ಮಳೆಯಾಗುವ ಹೆಚ್ಚಿನ ಸಾಧ್ಯತೆಯಿದೆ.
ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಹಲವೆಡೆ ಗುಡುಗು ಸಹಿತ ವ್ಯಾಪಕ ಮಳೆ ನಿರೀಕ್ಷಿಸಲಾಗಿದೆ. ಜುಲೈ 22ರಂದು ಯೆಲ್ಲೋ ಅಲರ್ಟ್, ಜುಲೈ 23 ಮತ್ತು 24ರಂದು ಆರೆಂಜ್ ಅಲರ್ಟ್ ಕೊಡಲಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಿಗೆ ಜುಲೈ 22, 23 ಮತ್ತು 24ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ, ಬೀದರ್, ವಿಜಯಪುರ, ಯಾದಗಿರಿ ಹಾಗೂ ಕಲಬುರ್ಗಿ ಜಿಲ್ಲೆಗಳ ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಜುಲೈ 22 ಮತ್ತು 23ರಂದು ಯೆಲ್ಲೋ ಅಲರ್ಟ್ ಘೊಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದ ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಬುಧವಾರ ನೈರುತ್ಯ ಮುಂಗಾರು ಸಾಮಾನ್ಯವಾಗಿತ್ತು. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ವ್ಯಾಪಕ ಮಳೆಯಾಗಿದ್ದು, ದಕ್ಷಿಣ ಒಳನಾಡಿನ ಬಹುತೇಕ ಎಲ್ಲ ಸ್ಥಳಗಳಲ್ಲಿ ಮಳೆಯಾಗಿದೆ. ಮುಖ್ಯವಾಗಿ, ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ 9 ಸೆಂ.ಮೀ, ಆಗುಂಬೆಯಲ್ಲಿ 8 ಸೆಂ.ಮೀ, ಉತ್ತರ ಕನ್ನಡದ ಕದ್ರಾಾ, ಶಿವಮೊಗ್ಗದ ತಾಳಗುಪ್ಪದಲ್ಲಿ ತಲಾ 7 ಸೆಂ.ಮೀ, ಉಡುಪಿಯ ಕೊಲ್ಲೂರಿನಲ್ಲಿ 6 ಸೆಂ.ಮೀ, ಉತ್ತರ ಕನ್ನಡದ ಸಿದ್ದಾಪುರ, ಧರ್ಮಸ್ಥಳ, ಶಿವಮೊಗ್ಗದ ಹೊಸನಗರದಲ್ಲಿ ತಲಾ 5 ಸೆಂ.ಮೀ. ಮಳೆಯಾಗಿದೆ ಎಂದು ಮಾಹಿತಿ ನೀಡಿದೆ.