ಟಾಸ್ಕ್ ನೀಡಿ ಅದರಲ್ಲಿ ಪಾಸಾದವರಿಗೆ ಕಮಿಷನ್ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ. ವಸೂಲಿ ಮಾಡಿ ವಂಚಿಸಿರುವ ಸಂಬಂಧ ವೈಟ್‍ಫೀಲ್ಡ್ ಸಿಇಎನ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ವರ್ತೂರಿನ 23 ವರ್ಷದ ಯುವಕ ವಂಚನೆಗೊಳಗಾದವ. ಈತನ ಮೊಬೈಲ್‍ಗೆ ಲಿಂಕ್ ಒಳಗೊಂಡ ಸಂದೇಶ ಬಂದಿದೆ. ಅದರ ಮೇಲೆ ಕ್ಲಿಕ್ ಮಾಡಿದಾಗ ಅಪರಿಚಿತ ವ್ಯಕ್ತಿ, ವಾಟ್ಸ್ಯಾಪ್‍ಗೆ ಸಂದೇಶ ಕಳುಹಿಸಿ ಅಮೆಜಾನ್ ಆ್ಯಪ್ ಡೌನ್‍ಲೋಡ್ ಲಿಂಕ್ ಸೆಂಡ್ ಮಾಡಿದ್ದ. ಜತೆಗೆ ಲಿಂಕ್‍ನಲ್ಲಿ ಲಾಗಿನ್ ಆಗಿ ನೋಂದಾಯಿಸಿಕೊಂಡ ಬಳಿಕ ಕೆಲವೊಂದು ಟಾಸ್ಕ್ ನೀಡಲಾಗುವುದು. ಅದನ್ನು ಪಾಸ್ ಮಾಡಿದರೆ ನಿಮಗೆ ಕಮಿಷನ್ ಬರಲಿದೆ. ಅದಕ್ಕೂ ಮೊದಲು ಲಾಗಿನ್ ಆಗಲು ಹಣ ಪಾವತಿಸಬೇಕೆಂದು ಹೇಳಿ ಒಂದು ಲಕ್ಷ ರೂ.ವರ್ಗಾವಣೆ ಮಾಡಿಸಿಕೊಂಡಿದ್ದಾನೆ.
ಬಳಿಕ ಯುವಕನಿಗೆ ಅನೇಕ ಟಾಸ್ಕ್ ಕೂಡ ಕೊಟ್ಟಿದ್ದು, ಎಲ್ಲವನ್ನೂ ಆತ ಪಾಸ್ ಮಾಡಿದ್ದ. ಆದರೆ, ಪಾಸ್ ಆದ ಮೇಲೂ ಯುವಕನಿಗೆ ಕಮಿಷನ್ ಹಣ ಬಂದಿರಲಿಲ್ಲ. ಹೀಗಾಗಿ, ಕೇಳಲೆಂದು ಟಾಸ್ಕ್ ನೀಡಿದವನಿಗೆ ಯುವಕ ಕರೆ ಮಾಡಿದ್ದಾನೆ. ಆದರೆ, ಸೈಬರ್ ಖದೀಮನ ಮೊಬೈಲ್ ಸ್ವಿಚ್ ಆಫ್ ಆಗಿರುವುದು ಗೊತ್ತಾಗಿದೆ.
ಇದೇ ರೀತಿ ವೈಟ್‍ಫೀಲ್ಡ್‍ನ ಇಮ್ಮಡಿಹಳ್ಳಿಯ 20 ವರ್ಷದ ಯುವಕನಿಗೆ ಅರೆಕಾಲಿಕ ನೌಕರಿ ನೀಡಲಾಗುವುದು. ಜತೆಗೆ ಕಮಿಷನ್ ಕೂಡ ದೊರೆಯಲಿದೆ ಎಂದು ಆಮಿಷವೊಡ್ಡಿ ಅಮೆಜಾನ್ ಆ್ಯಪ್ ಡೌನ್‍ಲೋಡ್ ಮಾಡಿಸಿದ್ದಾರೆ. ಅದಕ್ಕೆ ಯುವಕ ಒಪ್ಪಿಕೊಂಡಾಗ ಆತನಿಂದಲೂ 1 ಲಕ್ಷ ರೂ. ಪಡೆದು ಮೋಸ ಮಾಡಿದ್ದಾರೆ. ಇದೇ ರೀತಿ ಹಲವರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಸೈಬರ್ ಕ್ರೈಂ ಪೆÇಲೀಸರು ತಿಳಿಸಿದ್ದಾರೆ.