ಒಂದೇ ಚಿತ್ರದಲ್ಲಿ ಒಂದಕ್ಕೊಂದು ತದ್ವಿರುದ್ಧವಾದ ಪಾತ್ರಗಳಿದ್ದರೆ ಅದು ನಾಯಕ ಮಾತ್ರವಲ್ಲ, ಯಾವ ಕಲಾವಿದನಿಗಾದರೂ ಸವಾಲಿನ ಸಂಗತಿ. ಉಡುಂಬಾ ಚಿತ್ರದ ನಾಯಕ ಪವನ್ ಶೌರ್ಯ ಅವರಿಗೂ ಕೂಡಾ ಇಂಥಾದ್ದೊಂದು ಸವಾಲು ಎದುರಾಗಿತ್ತಂತೆ.
ಯಾಕೆಂದರೆ ಇಲ್ಲಿಯೂ ಕೂಡಾ ಒಂದಷ್ಟು ಭಿನ್ನ ಶೇಡುಗಳಿರೋ ಪಾತ್ರಗಳೇ ಅವರನ್ನು ಅರಸಿ ಬಂದಿದ್ದವು. ಕೇವಲ ನಟನೆಯಲ್ಲಿ ಮಾತ್ರವಲ್ಲದೇ ದೈಹಿಕವಾಗಿಯೂ ಕಸರತ್ತು ನಡೆಸಬೇಕಾದ ಅನಿವಾರ್ಯತೆಯೂ ಪವನ್ ಪಾಲಿಗೆ ಬಂದೊದಗಿತ್ತಂತೆ. ಅದೆಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸಿ ತಮ್ಮ ವರ್ಷಾಂತರಗಳ ಶ್ರಮವನ್ನು ಪ್ರೇಕ್ಷಕರು ಯಾವ ರೀತಿ ಸ್ವೀಕರಿಸುತ್ತಾರೆಂಬ ಕುತೂಹಲದಿಂದ ಪವನ್ ಕಾಯುತ್ತಿದ್ದಾರೆ.
ಈಗಾಗಲೇ ಈ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿರೋ ಪ್ರಶ್ನೆಗಳಿಗೆ ಮತ್ತು ಈ ಸಿನಿಮಾವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆಂಬಂಥಾ ಚಿತ್ರತಂಡದ ಕುತೂಹಲಕ್ಕೆ ಈ ವಾರ ಅಚಿದರೆ, ಇಪ್ಪತ್ಮೂರನೇ ತಾರೀಕಿನಂದು ನಿಖರ ಉತ್ತರ ಸಿಗಲಿದೆ. ನಿರ್ದೇಶಕ ಶಿವರಾಜ್ ಏನಂದುಕೊಂಡಿದ್ದಾರೋ ಅದೇ ರೀತಿ ದೃಷ್ಯಗಳು ಮೂಡಿ ಬರಬೇಕೆಂಬ ಛಲ ಹೊಂದಿರುವವರು. ನಾಯಕ ಪವನ್ ಪಾತ್ರದ ಬಗೆಗಂತೂ ಅವರು ಸಣ್ಣ ಕಾಂಪ್ರೋಮೈಸ್ ಕೂಡಾ ಮಾಡಿಕೊಂಡಿಲ್ಲವಂತೆ. ಇಂಥಾ ಮನಸ್ಥಿತಿಯಿಂದಲೇ ಶಿವರಾಜ್ ಸಿಕ್ಸ್ ಪ್ಯಾಕಿನ ಬೇಡಿಕೆಯೊಂದನ್ನು ಪವನ್ ಮುಂದಿಟ್ಟಿದ್ದರಂತೆ.
ಅಷ್ಟಕ್ಕೂ ಪವನ್ ಜಿಮ್ ಪವನ್ ಎಂದೇ ಪ್ರಸಿದ್ಧಿ ಪಡೆದುಕೊಂಡಿರುವವರು. ಅವರೇ ಸ್ವತಃ ಒಂದಷ್ಟು ಜಿಮ್ ಸೆಂಟರುಗಳನ್ನು ಹೊಂದಿದ್ದಾರೆ. ತಮ್ಮ ದೇಹವನ್ನೂ ಕೂಡಾ ಆ ಮೂಲಕವೇ ಹುರಿಗೊಳಿಸಿಕೊಂಡಿದ್ದಾರೆ. ದೈಹಿಕ ಕಸರತ್ತುಗಳೇನೂ ಅವರಿಗೆ ಹೊಸತಲ್ಲ. ಆದರೆ ನಿರ್ದೇಶಕರು ಸಿಕ್ಸ್ ಪ್ಯಾಕಿನ ಬೇಡಿಕೆ ಇಡುವ ಹೊತ್ತಿನಲ್ಲಿ ಅವರ ಮನೆಯಲ್ಲಿ ವ್ರತವೊಂದು ನಡೆಯುತ್ತಿತ್ತಂತೆ.
ಆದರೂ ತಲೆಕೆಡಿಸಿಕೊಳ್ಳದೆ ಸಸ್ಯಾಹಾರಿ ಆಹಾರ ಪದ್ಧತಿಯಲ್ಲಿಯೇ ಅದಕ್ಕಾಗಿ ಪ್ರಯತ್ನಿಸಿದ ಪವನ್ ನಿನಕ್ಕೆ ಆರು ಘಂಟೆಗೂ ಹೆಚ್ಚು ಸಮಯ ದೈಹಿಕ ಕಸರತ್ತಿಗಾಗಿ ಮೀಸಲಿಟ್ಟಿದ್ದರು. ಕೇವಲ ಎರಡೇ ತಿಂಗಳಲ್ಲಿ ಸಿಕ್ಸ್ ಪ್ಯಾಕಿನೊಂದಿಗೆ ನಿರ್ದೇಶಕರ ಎದುರು ನಿಂತು ಕಂಗಾಲಾಗಿಸಿದ್ದರು. ಇಂಥಾ ಶ್ರದ್ಧೆ, ಛಲದಿಂದ ರೂಪುಗೊಂಡಿರೋ ಉಡುಂಬಾ ಅದ್ದೂರಿಯಾಗಿರುತ್ತೆ ಅನ್ನೋದರಲ್ಲಿ ಯಾವ ಸಂಶಯವೂ ಇಲ್ಲ.