ಹೊಸದಾಗಿ ಪಾದಾರ್ಪಣೆ ಮಾಡುವ ಯಾರೇ ಆದರೂ ಮೊದಲ ಚಿತ್ರದಲ್ಲಿಯೇ ಎಲ್ಲರೂ ಬೆರಗಾಗುವಂಥಾ ಪಾತ್ರ ಸಿಗುವುದು, ಅದರಲ್ಲಿ ಪರಿಣಾಮಕಾರಿಯಾಗಿ ಅಭಿನಯಿಸೋದೆಲ್ಲವೂ ಕಷ್ಟದ ಸಂಗತಿ. ಆದರೆ ಪವನ್ ಶೌರ್ಯ ಅದನ್ನು ಸಾಧ್ಯವಾಗಿಸಿಕೊಂಡಿದ್ದಾರೆ.
ಗೂಳಿಹಟ್ಟಿ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದುಕೊಂಡಿರುವ ಪವನ್ ಶೌರ್ಯ ಪಾಲಿಗೆ ಉಡುಂಬಾ ಚಿತ್ರದಲ್ಲಿಯೂ ಅಂಥಾದ್ದೇ ಸವಾಲಿನ ಪಾತ್ರ ಸಿಕ್ಕಿದೆ. ಕೆಲ ದಿನಗಳ ಹಿಂದೆ ಬಿಡುಗಡೆಯಾಗಿದ್ದ ಟ್ರೇಲರ್ ಮೂಲಕವೇ ಈ ಸಿನಿಮಾದ ಬಗ್ಗೆ ಎಲ್ಲ ವರ್ಗಗಳ ಪ್ರೇಕ್ಷಕರ ನಡುವೆಯೂ ಚರ್ಚೆಗಳು ಆರಂಭವಾಗಿವೆ. ಅದುವೇ ಮೊದಲ ಶೋನಲ್ಲಿಯೇ ಉಡುಂಬಾನನ್ನು ಕಣ್ತುಂಬಿಕೊಳ್ಳುವ ಉತ್ಸಾಹವಾಗಿಯೂ ಬದಲಾಗಿದೆ.
ಇದು ಶಿವರಾಜ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಚಿತ್ರ. ಈ ಹೊತ್ತಿಗಾಗಲೇ ಪವನ್ ಶೌರ್ಯ ಉಡುಂಬನಾಗಿ ಅದೆಂಥಾ ಪರಾಕ್ರಮ ತೋರಿಸಿದ್ದಾರೆಂಬ ಸ್ಪಷ್ಟ ಅಂದಾಜು ಪ್ರೇಕ್ಷಕರಿಗೆಲ್ಲ ಸಿಕ್ಕಿ ಹೋಗಿದೆ. ಆರಂಭದಲ್ಲಿಯೇ ಪಳಗಿದ ನಟರೂ ನಿರ್ವಹಿಸಲು ಕಷ್ಟವಾಗುವಂಥಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಪವನ್ ಪಾಲಿಗೆ ಉಡುಂಬಾದ ಅವಕಾಶ ಕೂಡಿ ಬಂದಿದ್ದು ಕೂಡಾ ಅವರ ನಟನೆಯ ಕಸುವಿನ ಕಾರಣದಿಂದಲೇ. ಹಾಗೊಂದು ವಿಶ್ವಾಸದಿಂದಲೇ ಉಡುಂಬನಾಗೋ ಅವಕಾಶ ಗಿಟ್ಟಿಸಿಕೊಂಡಿರುವ ಪವನ್ ಇಡೀ ಚಿತ್ರತಂಡವೇ ಅಚ್ಚರಿಗೀಡಾಗುವಂತೆ ನಟಿಸಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.
ಇಲ್ಲಿ ಪವನ್ ಅವರ ಪಾತ್ರಕ್ಕೆ ಒಂದಷ್ಟು ಶೇಡುಗಳಿವೆ. ಅದು ಒಂದಕ್ಕೊಂದು ತದ್ವಿರುದ್ಧವಾದ ಪಾತ್ರ. ಒಚಿದು ಶೇಡಿನಲ್ಲಿ ಅವರು ಸಾದಾಸೀದಾ ಮೀನುಗಾರರ ಹುಡುಗನಾಗಿ, ಹುಡುಗಿಯ ಬೆಂಬಿದ್ದು ಅಲೆಯೋ ಪ್ರೇಮಿಯಾಗಿ ನಟಿಸಿದರೆ, ಮತ್ತೊಂದು ಶೇಡಿನಲ್ಲಿ ಅಬ್ಬರದ ಉಡುಂಬಾವತಾರ ತಾಳಿದ್ದಾರೆ. ಅದು ತನಗಾದ ವಿನಾಕಾರಣ ಅವಮಾನ ಮತ್ತು ತನ್ನ ವಿರುದ್ಧ ನಡೆದ ಷಡ್ಯಂತ್ರದ ವಿರುದ್ಧ ತಿರುಗಿ ಬೀಳುವ ಪಾತ್ರ. ಇದರ ಜೊತೆಗೇ ಸೆಂಟಿಮೆಂಟ್, ಭರ್ಜರಿ ಕಾಮಿಡಿ, ಪ್ರೀತಿಯೊಂದಿಗೆ ಉಡುಂಬಾ ಅದ್ದೂರಿಯಾಗಿ ಮೂಡಿ ಬಂದಿದ್ದಾನೆ. ಈ ವಾರ ಅಂದರೆ 23ನೇ ತಾರೀಕಿನಂದು ಅದೆಲ್ಲವೂ ನಿಮ್ಮ ಮುಂದೆ ಜಾಹೀರಾಗಲಿದೆ.