ಕನ್ನಡ ಚಿತ್ರರಂಗವೆಂದರೆ ಪರಭಾಷಾ ಚಿತ್ರರಂಗದ ಮಂದಿ ಅಸಡ್ಡೆಯಿಂದ ನೋಡೋ ಕಾಲವೊಂದಿತ್ತು. ಆದರೆ ಈಗ ಕನ್ನಡದ ನೆಲದಲ್ಲಿ ಸಿನಿಮಾವೊಂದು ಅಬ್ಬರಿಸಿದರೆ ಅದರ ಸದ್ದು ಆಸುಪಾಸಿನ ಭಾಷೆಗಳಲ್ಲಿಯೂ ಮಾರ್ಧನಿಸುತ್ತೆ. ಅದೇ ರೀತಿ ಉಡುಂಬಾ ಚಿತ್ರ ಕೂಡಾ ಪರಭಾಷಾ ಚಿತ್ರರಂಗದ ಮಂದಿಯ ಗಮನ ಸೆಳೆದುಕೊಂಡಿದೆ.
ಟ್ರೇಲರ್ ಬಂದ ಮೇಲಂತೂ ಬೇರೆ ಬೇರೆ ಭಾಷೆಗಳಲ್ಲಿಯೂ ಉಡುಂಬಾ ಬಗ್ಗೆ ಭರವಸೆ ಮೂಡಿಕೊಂಡಿದೆ. ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಅವರೇ ಉಡುಂಬಾನನ್ನು ಮೆಚ್ಚಿಕೊಂಡು ಮಾತಾಡುತ್ತಾರೆಂದರೆ, ಈ ಚಿತ್ರ ಅದೆಷ್ಟು ಸಮ್ಮೋಹಕವಾಗಿ ಮೂಡಿ ಬಂದಿರಬಹುದೆಂಬ ಅಂದಾಜು ಯಾರಿಗಾದರೂ ಸಿಗುತ್ತದೆ.
ಉಡುಂಬಾ ಚಿತ್ರವನ್ನು ಶಿವರಾಜ್ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಗೂಳಿಹಟ್ಟಿ ಚಿತ್ರದ ನಟನೆಗೆಂದು ರಾಷ್ಟ್ರಪ್ರಶಸ್ತಿ ಪಡೆದುಕೊಂಡಿದ್ದ ಪವನ್ ಶೌರ್ಯ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆ. ಇದೀಗ ತೆಲುಗು ನಿರ್ದೇಶಕ ಪುರಿ ಜಗನ್ನಾಥ್ ಅವರು ಈ ಚಿತ್ರ ಮೂಡಿ ಬಂದಿರೋ ರೀತಿ ಮತ್ತು ಅದರಲ್ಲಿ ಪವನ್ ಅಬ್ಬರಿಸಿರೋ ಪರಿಯನ್ನು ಮೆಚ್ಚಿಕೊಂಡು ಮಾತಾಡಿದ್ದಾರೆ. ಈ ಬಗ್ಗೆ ಅವರು ಪವನ್ಗೆ ಕರೆ ಮಾಡಿ ಮೆಚ್ಚಿಕೊಂಡಿದ್ದಾರಂತೆ. ಜೊತೆಗೆ ಉಡುಂಬಾ ಬಿಡುಗಡೆಯಾದ ಮೊದಲ ದಿನವೇ ಬೆಂಗಳೂರಿಗೆ ಬಂದು ನೋಡೋದಾಗಿಯೂ ಹೇಳಿದ್ದಾರಂತೆ.
ಇದರಿಂದ ಪವನ್ ಮಾತ್ರವಲ್ಲದೇ ಇಡೀ ಚಿತ್ರತಂಡವೇ ಖುಷಿಗೊಂಡಿದೆ. ಪುರಿ ಜಗನ್ನಾಥ್ ತೆಲುಗಿನಲ್ಲಿ ಅದೆಷ್ಟೋ ಹಿಟ್ ಚಿತ್ರಗಳನ್ನು ನೀಡಿರುವ ನಿರ್ದೇಶಕ. ಅದೇನೇ ಗೆಳೆತನ, ಪರಿಚಯ ಅಂತಿದ್ದರೂ ಅವರ ಕಡೆಯಿಂದ ಮೆಚ್ಚುಗೆ ಗಳಿಸಿಕೊಳ್ಳೋದು ಕಷ್ಟದ ಕೆಲಸ. ರಾಮ್ ಗೋಪಾಲ್ ವರ್ಮಾರಂತೆಯೇ ನೇರ ನಿಷ್ಠುರವಾದಿಯಾದ ಪುರಿ ಜಗನ್ನಾಥ್ ಗಮನ ಸೆಳೆದಿದೆ ಅನ್ನೋದು ಉಡುಂಬಾನ ಒಡಲಲ್ಲಿರೋ ಗಟ್ಟಿ ಕಥೆಗೆ ಸಾಕ್ಷಿ. ಇಂಥಾ ಮೆಚ್ಚುಗೆಗಳನ್ನು ನಿಜವಾಗಿಸುವಂಥಾ ಕಂಟೆಂಟು ಹೊಂದಿರೋ ಉಡುಂಬಾ ಈ ವಾರ ಅಚಿದರೆ 23ರಂದು ತೆರೆಗಾಣುತ್ತಿದೆ.