ಶಿವರಾಜ್ ನಿರ್ದೇಶನದ ಉಡುಂಬಾ ಚಿತ್ರ ಇದೇ ವಾರ ರಾಜ್ಯಾದ್ಯಂತ ತೆರೆಗಾಣುತ್ತಿದೆ. ಕೊಂಚ ತಡವಾದರೂ ನಿಗಿನಿಗಿಸೋ ಕುತೂಹಲದ ಒಡ್ಡೋಲಗದೊಂದಿಗೇ ಈ ಚಿತ್ರ ಥೇಟರಿನತ್ತ ಹೊರಟಿದೆ.
ಬಿಡುಗಡೆಯ ಕಡೇಯ ಕ್ಷಣಗಳಲ್ಲಿ ಲಾಂಚ್ ಆಗಿರೋ ಟ್ರೇಲರ್ ಮೂಲಕ ಉಡುಂಬಾನ ಮೇಲೆ ಗಾಢವಾದ ಭರವಸೆಯೊಂದು ಪ್ರೇಕ್ಷಕರಲ್ಲಿ ಪಡಿಮೂಡಿಕೊಂಡಿದೆ. ಇದು ನಿರ್ದೇಶಕರ ಪಾಲಿಗೆ ಮೊದಲ ಚಿತ್ರವೆಂಬುದನ್ನೂ ಮರೆಮಾಚುವಂತೆ ಉಡುಂಬಾ ಅಬ್ಬರ ಮೆರೆಯಲಾರಂಭಿಸಿದೆ.
ಈಗಾಗಲೇ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಒಂದಷ್ಟು ವರ್ಷಗಳ ಕಾಲ ಅನುಭವ ಹೊಂದಿರುವವರು ಶಿವರಾಜ್. ಮೂಲತಃ ಬೆಂಗಳೂರಿನವರೇ ಆದ, ಕನ್ನಡ ಸಿನಿಮಾಗಳನ್ನು ನೋಡುತ್ತಲೇ ನಿರ್ದೇಶಕರಾಗೋ ಕನಸು ಕಟ್ಟಿಕೊಂಡ ಶಿವರಾಜ್ ಪಾಲಿಗೆ ಆರಂಭಿಕ ಕಲಿಕೆಗೆ ಅವಕಾಶ ಸಿಕ್ಕಿದ್ದದ್ದು ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ. ಆದರೆ ಅನುಭವ ಯಾವ ಭಾಷೆಯಲ್ಲಿ ದಕ್ಕಿದರೂ ಸ್ವತಂತ್ರ ನಿರ್ದೇಶಕನಾಗಿ ತನ್ನ ಮೊದಲ ಹೆಜ್ಜೆ ಕನ್ನಡ ಚಿತ್ರರಂಗದಿಂದಲೇ ಆರಂಭವಾಗಬೇಕನ್ನೋದು ಶಿವರಾಜ್ರ ಕನಸಾಗಿತ್ತು. ಅದಕ್ಕೆ ತಕ್ಕುದಾಗಿ ಒಂದೊಳ್ಳೆ ಕಥೆ ರೆಡಿ ಮಾಡಿಕೊಂಡು ಆರಂಭಿಸಿದ ಚಿತ್ರ ಉಡುಂಬಾ.
ಇವನು ಕಡಲಮಕ್ಕಳ ಮೀನುಗಾರರ ಒಡಲ ಕಥೆಯಿಂದಲೇ ರೂಪುಗೊಂಡಿರೋ ಉಡುಂಬಾ. ಹಾಗಂತ ಇಲ್ಲಿ ಮೀನುಗಾರರ ಬದುಕಿನ ಕಥೆ ಕಟ್ಟು ಕೊಡೋ ಪ್ರಯತ್ನ ಮಾತ್ರವೇ ನಡೆದಿದೆ ಅಂದುಕೊಳ್ಳಬೇಕಿಲ್ಲ. ಮೀನುಗಾರರ ಬದುಕಿನ ಹಿನ್ನೆಲೆಯಲ್ಲಿ ಈ ಕಥೆ ಘಟಿಸುತ್ತದೆ. ತನ್ನ ಪಾಡಿಗೆ ತಾನು ತನ್ನದೇ ಲೋಕದಲ್ಲಿ ಬದುಕೋ ಸಾಮಾನ್ಯ ಹುಡುಗನೊಬ್ಬ ರಕ್ಕಸರಿಗೆ ಎದೆಗೊಟ್ಟು ಬಡಿದಾಡೋ ರೋಚಕ ಕಥೆಯನ್ನು ಈ ಚಿತ್ರ ಒಳಗೊಂಡಿದೆ. ಹಾಗೆ ಸಾಮ,ಆನ್ಯ ಹುಡುಗನೊಬ್ಬ ಅಸಾಮಾನ್ಯ ಅವತಾರವೆತ್ತಲು ಕಾರಣವೇನು? ನಿಜಕ್ಕೂ ಉಡುಂಬಾನ ಅವತಾರ ಎಂಥಾದ್ದೆಂಬುದಕ್ಕೆ ಈ ವಾರವೇ ಉತ್ತರ ಸಿಗಲಿದೆ.