Publish Date: Tue, 22 Sep 2020 (09:07 IST)
Updated Date: Tue, 22 Sep 2020 (09:09 IST)
ದುಬೈ: ಐಪಿಎಲ್ 13 ರ ಮೊದಲ ಪಂದ್ಯದಲ್ಲೇ ಗೆದ್ದು ಬೀಗಿದ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಶುಭಾರಂಭ ಮಾಡಿದೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 10 ರನ್ ಗಳ ಜಯ ಗಳಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತು. ಆರ್ ಸಿಬಿ ಆರಂಭ ಉತ್ತಮವಾಗಿತ್ತು. ಪಾರ್ಥಿವ್ ಪಟೇಲ್ ಬದಲಿಗೆ ಆರಂಭಿಕರಾಗಿ ಕಣಕ್ಕಿಳಿದ ಕನ್ನಡಿಗ ದೇವದತ್ತ ಪಡಿಕ್ಕಲ್ 56 ರನ್ ಗಳಿಸಿ ಮಿಂಚಿದರು. ಇವರಿಗೆ 29 ರನ್ ಗಳಿಸಿದ ಏರಾನ್ ಫಿಂಚ್ ಉತ್ತಮ ಸಾಥ್ ನೀಡಿದರು. ಆದರೆ ಫಿಂಚ್ ಔಟಾದ ಬಳಿಕ ಬಂದ ನಾಯಕ ಕೊಹ್ಲಿ 14 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಆದರೆ ಇನ್ನೊಂದೆಡೆ ಖ್ಯಾತಿಗೆ ತಕ್ಕ ಆಟವಾಡಿದ ಎಬಿಡಿ ವಿಲಿಯರ್ಸ್ 51 ರನ್ ಗಳಿಸಿ ಕೊನೆಯ ಓವರ್ ನಲ್ಲಿ ದುರಾದೃಷ್ಟವಶಾತ್ ರನೌಟ್ ಆದರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಹೈದರಾಬಾದ್ 19.4 ಓವರ್ ಗಳಲ್ಲಿ 153 ರನ್ ಗೆ ಆಲೌಟ್ ಆಯಿತು. ಆರಂಭಿಕ ಬೇರ್ ಸ್ಟೋ (61) ಮತ್ತು ಮನೀಶ್ ಪಾಂಡೆ (34) ಉತ್ತಮ ಆಟವಾಡಿದ್ದು ಬಿಟ್ಟರೆ ಉಳಿದವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಬರಲಿಲ್ಲ. ಪ್ರಮುಖವಾಗಿ ಆರ್ ಸಿಬಿ ಪರ ಅತ್ಯುತ್ತಮ ದಾಳಿ ಸಂಘಟಿಸಿದ ಯಜುವೇಂದ್ರ ಚಾಹಲ್ 4 ಓವರ್ ಗಳಲ್ಲಿ ಕೇವಲ 18 ರನ್ ಬಿಟ್ಟುಕೊಟ್ಟು ಮೂರು ಪ್ರಮುಖ ವಿಕೆಟ್ ಕಬಳಿಸಿದರು. ಉಳಿದಂತೆ ನವದೀಪ್ ಸೈನಿ ಮತ್ತು ಶಿವಂ ದುಬೆ ತಲಾ 2 ವಿಕೆಟ್ ಕಬಳಿಸಿದರು.