ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ನಿವೃತ್ತರಾಗಿ ಇಷ್ಟು ಸಮಯವೇ ಆದರೂ ಇದುವರೆಗೆ ಸಕ್ರಿಯ ಕ್ರಿಕೆಟ್ ನಿಂದ ದೂರವೇ ಇದ್ದಾರೆ. ಇದೀಗ ಅವರು ಬಿಸಿಸಿಐನ ಪ್ರಮುಖ ಹುದ್ದೆಯೊಂದನ್ನು ವಹಿಸಿಕೊಳ್ಳುವ ಬಗ್ಗೆ ಅಧ್ಯಕ್ಷ ಸೌರವ್ ಗಂಗೂಲಿ ಸುಳಿವು ನೀಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡುವಾಗ ಗಂಗೂಲಿ ಸಚಿನ್ ಬಿಸಿಸಿಐಗೆ ಎಂಟ್ರಿ ಕೊಡುವ ಬಗ್ಗೆ ಮಾತನಾಡಿದ್ದಾರೆ. ಮುಂದೆ ಅವರನ್ನು ಪ್ರಮುಖ ಹುದ್ದೆಯಲ್ಲಿ ನೋಡಬಹುದು ಎಂದಿದ್ದಾರೆ.
ಈಗ ಏನೇ ಹುದ್ದೆ ವಹಿಸಿಕೊಳ್ಳುವುದಿದ್ದರೂ ಸ್ವಹಿತಾಸಕ್ತಿ ದೂರು ದಾಖಲಾಗುತ್ತದೆ. ಬೇಕೆಂದೇ ಈ ವಿವಾದ ಎತ್ತುತ್ತಾರೆ. ಇದರಿಂದ ಪ್ರತಿಭಾವಂತರು ಬಿಸಿಸಿಐ ಹುದ್ದೆ ವಹಿಸಿಕೊಳ್ಳಲಾಗುತ್ತಿಲ್ಲ. ಸಚಿನ್ ಬಿಸಿಸಿಐ ಹುದ್ದೆಗಳಲ್ಲಿ ಆಸಕ್ತಿ ಹೊಂದಿಲ್ಲ. ಆದರೆ ಒಂದಲ್ಲಾ ಒಂದು ರೀತಿಯಲ್ಲಿ ಬಿಸಿಸಿಐ ಜೊತೆ ಇರುತ್ತಾರೆ. ಅದು ಹೇಗೆ ಎಂದು ಮುಂದಿನ ದಿನಗಳಲ್ಲಿ ಕಾದು ನೋಡಬೇಕು ಎಂದು ಗಂಗೂಲಿ ಹೇಳಿದ್ದಾರೆ. ಈಗಾಗಲೇ ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್ ರನ್ನು ಬಿಸಿಸಿಐಗೆ ಕರೆತಂದಿರುವ ಗಂಗೂಲಿ ಈಗ ಸಚಿನ್ ರನ್ನೂ ಕರೆತರುವ ಪ್ರಯತ್ನದಲ್ಲಿದ್ದಾರೆ.