ಮುಂಬೈ: ಟಿ20 ನಾಯಕತ್ವ ತ್ಯಜಿಸಲು ಹೊರಟಾಗ ಕೊಹ್ಲಿಗೆ ಬೇಡವೆಂದು ಮನವಿ ಮಾಡಲಾಗಿತ್ತು ಎಂಬ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯನ್ನು ವಿರಾಟ್ ಕೊಹ್ಲಿ ಬಹಿರಂಗವಾಗಿಯೇ ನಿರಾಕರಿಸಿದ್ದಾರೆ. ಇದೀಗ ಕೊಹ್ಲಿ ಮತ್ತು ಬಿಸಿಸಿಐ ನಡುವೆ ಶೀತಲ ಸಮರಕ್ಕೆ ಕಾರಣವಾಗಿದೆ.
ಮಾಧ್ಯಮ ಸಂದರ್ಶನದಲ್ಲಿ ಕೊಹ್ಲಿ ನಾನು ಟಿ20 ನಾಯಕತ್ವ ತ್ಯಜಿಸುವಾಗ ಯಾರೂ ಬೇಡವೆನ್ನಲಿಲ್ಲ. ಎಲ್ಲರೂ ಅದನ್ನು ಸ್ವಾಗತಿಸಿದರು ಎಂದು ಕೊಹ್ಲಿ ಹೇಳಿರುವುದು ಬಿಸಿಸಿಐಗೆ ಇರಿಸುಮುರಿಸು ಉಂಟು ಮಾಡಿದೆ.
ಟಿ20 ನಾಯಕತ್ವ ತ್ಯಜಿಸುತ್ತೇನೆ ಮತ್ತು ಟೆಸ್ಟ್, ಏಕದಿನ ನಾಯಕನಾಗಿ ಮುಂದುವರಿಯುತ್ತೇನೆ ಎಂದು ದೂರವಾಣಿ ಮೂಲಕ ನಾನು ಬಿಸಿಸಿಐ ಅಧಿಕಾರಿಗಳಿಗೆ, ಆಯ್ಕೆಗಾರರಿಗೆ ಹೇಳಿದಾಗ ಯಾರೂ ಏನೂ ಹೇಳಿರಲಿಲ್ಲ. ಬಿಸಿಸಿಐ ಜೊತೆಗೆ ನನ್ನ ಸಂವಹನ ಸ್ಪಷ್ಟವಾಗಿತ್ತು. ಅಲ್ಲದೆ, ಬಿಸಿಸಿಐ ಅಥವಾ ಆಯ್ಕೆಗಾರರು ಯಾವುದೇ ತೀರ್ಮಾನ ತೆಗೆದುಕೊಳ್ಳುವುದಿದ್ದರೂ ಅದಕ್ಕೂ ನಾನು ಬದ್ಧ ಎಂದಿದ್ದೆ ಎಂದು ಕೊಹ್ಲಿ ಹೇಳಿದ್ದಾರೆ. ಇದು ಗಂಗೂಲಿ ಹೇಳಿಕೆಗೆ ತದ್ವಿರುದ್ಧವಾಗಿದೆ. ಹೀಗಾಗಿ ಬಿಸಿಸಿಐಗೆ ಕೊಹ್ಲಿಯ ಈ ಹೇಳಿಕೆ ಮುಜುಗುರವುಂಟು ಮಾಡಿದೆ.
ಇನ್ನು, ಏಕದಿನ ನಾಯಕರಾಗಿ ನೇಮಕಗೊಂಡಿರುವ ರೋಹಿತ್ ಶರ್ಮಾ ಮತ್ತು ನೂತನ ಕೋಚ್ ದ್ರಾವಿಡ್ ಗೆ ತಮ್ಮ ಸಂಪೂರ್ಣ ಬೆಂಬಲವಿರಲಿದೆ. ಇದುವರೆಗೆ ಟೀಂ ಇಂಡಿಯಾ ನಾಯಕರಾಗಿ, ಐಪಿಎಲ್ ನಾಯಕರಾಗಿ ರೋಹಿತ್ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ರಾಹುಲ್ ದ್ರಾವಿಡ್ ಕೂಡಾ ಅತ್ಯುತ್ತಮ ಕೋಚ್. ಅವರಿಗೆ ಮ್ಯಾನ್ ಮ್ಯಾನೇಜ್ ಮೆಂಟ್ ಚೆನ್ನಾಗಿ ಗೊತ್ತು. ಇಬ್ಬರಿಗೂ ನನ್ನ ಬೆಂಬಲ ಮುಂದುವರಿಯಲಿದೆ ಎಂದು ಕೊಹ್ಲಿ ಹೇಳಿಕೆ ನೀಡಿದ್ದಾರೆ.