ಬೆಂಗಳೂರು: ಪ್ರೀತಿಯೆಂದರೆ ಅದೊಂದು ನವಿರಾದ ಅನುಭೂತಿ. ಪ್ರೇಮಿಗಳ ದಿನ ಬರುತ್ತಿದ್ದಂತೆ ಹಳೆ ಗಾಯದ ಗುರುತಂತೆ ಮನದ ಮೂಲೆಗೆ ತಳ್ಳಿದ್ದ ಹಳೆ ಪ್ರೇಮಿಯ ನೆನಪಗಳು ದುತ್ತೆಂದು ಕಣ್ಮುಂದೆ ಬರುತ್ತದೆ. ಕಾಲೇಜಿಗೆ ಹೋಗುತ್ತಿದ್ದ ಸಮಯವದು. ಎಲ್ಲರಿಂದಲೂ, ಎಲ್ಲವೂಗಳಿಂದಲೂ ಆಕರ್ಷಿತಗೊಳ್ಳುವ ವಯಸ್ಸದು. ನೆಪ ಮಾತ್ರಕ್ಕೊಂದು ಮನಸ್ಸಿಗೆ ಕಡಿವಾಣ ಹಾಕಿಕೊಂಡು , ತೋರಿಕೆಗಾಗಿ ಗಂಟುಮುಖ ಹೊತ್ತುಕೊಂಡು ತಲೆಬಗ್ಗಿಸಿ ನಡೆಯುತ್ತಿದ್ದೆ.
ಅದ್ಯಾವಾಗ ಅವನು ಕಣ್ಮುಂದೆ ಬಂದು ಹಾಯ್ ಹೇಳಿದನೋ ಗೊತ್ತಾಗಲಿಲ್ಲ. ಸುಧಾರಿಸಿಕೊಂಡು ಬಿರುಗಣ್ಣು ಮಾಡಿಕೊಂಡು ಏನು ಎಂದು ಕೇಳುವಾಗ ನನ್ನಲ್ಲಿದ್ದ ಧೈರ್ಯವೆಲ್ಲಾ ಉಡುಗಿ ಹೋಗಿತ್ತು. ನನ್ನ ಮುಖದ ಭಾವಕ್ಕೂ, ಹೆದರಿದ ಧ್ವನಿಗೂ ಸಂಬಂಧವೇ ಇಲ್ಲ ಎಂದು ಅನಿಸುತ್ತಿತ್ತು. ಅದು ಅವನಿಗೆ ಕೂಡ ಗೊತ್ತಾಗಿತ್ತು. ಸುಮ್ಮನೇ ನಸುನಕ್ಕು ವಿಸಿಟಿಂಗ್ ಕಾರ್ಡ್ ವೊಂದನ್ನು ಕೈಗಿತ್ತು ಹಿಂದಿರುಗಿ ನೋಡದೇ ಹೊರಟೇ ಬಿಟ್ಟ.
ಯಾರಾದರೂ ನೋಡಿರಬಹುದಾ…ನಾನು ಹೀಗೆ ಇರುವುದನ್ನು ಎಂದು ಎರಡು ಮೂರು ಸಲ ಹಿಂದೆ ಮುಂದೆ ನೋಡಿದೆ ಯಾರೂ ಕಾಣಿಸಲಿಲ್ಲ. ನಿಧಾನಕ್ಕೆ ಒಮ್ಮೆ ಉಸಿರೆಳೆದುಕೊಂಡು ಕೈಯಲ್ಲಿದ್ದ ವಿಸಿಟಿಂಗ್ ಕಾರ್ಡ್ ಅನ್ನು ಬ್ಯಾಗ್ ನೊಳಗೆ ಇರಿಸಿಕೊಂಡೆ. ಕ್ಲಾಸಿನೊಳಗೆ ಕೂತರು ಮತ್ತದೇ ಕಂಗಳು, ಹಾಯ್ ಎಂದು ಹೇಳಿದ ಧ್ವನಿ ನನ್ನನ್ನು ಕಾಡುತ್ತಿತ್ತು. ಯಾರಿರಬಹುದು, ನನಗ್ಯಾಕೆ ವಿಸಿಟಿಂಗ್ ಕಾರ್ಡ್ ಕೊಟ್ಟ ಎಂಬೆಲ್ಲಾ ಪ್ರಶ್ನೆ ಮನದಲ್ಲಿ ಸುಳಿದಾಡುತ್ತಿತ್ತು. ಮರುದಿನ ಕಾಲೇಜಿಗೆ ಹೀಗುವಾಗ ತುಸು ಕಾಳಜಿ ವಹಿಸಿ ನನ್ನನ್ನು ಸಿಂಗರಿಸಿಕೊಂಡು ಹೋಗಿದ್ದೆ. ಅದೇ ಜಾಗದ ಬಳಿ ಬಂದಾಗ ಕಾಲುಗಳು ಒಂದೆರೆಡು ಹೆಜ್ಜೆ ನಿಧಾನಕ್ಕೆ ಊರಿದವು. ಅವನು ಅಲ್ಲೆ ಇದ್ದಿರಬಹುದಾ ಎಂದು ಕಣ್ಣುಗಳು ಹುಡುಕಲು ಶುರು ಮಾಡಿದವು. ಆದರೆ ಅವನ ಸುಳಿವೇ ಇರಲಿಲ್ಲ. ಅರೆಕ್ಷಣ ಬೇಸರ ಅನಿಸಿದರೂ ನನಗ್ಯಾಕೆ ಇಲ್ಲದ ಉಸಾಬರಿ ಅನಿಸಿ ಸುಮ್ಮನಾದೆ.
ಒಂದೆರೆಡು ದಿನ ಹೀಗೆ ಮುಂದುವರಿಯಿತು. ಅವನ ಸುಳಿವಿರಲಿಲ್ಲ. ಬ್ಯಾಗ್ ನಲ್ಲಿದ್ದ ಅವನ ವಿಸಿಟಿಂಗ್ ಕಾರ್ಡ್ ನಲ್ಲಿರುವ ಫೋನ್ ನಂಬರ್ ಗೆ ಕಾಲ್ ಮಾಡೋಣ ಎಂದು ಕೈಗೆತ್ತಿಕೊಂಡೆ. ವಿಸಿಟಿಂಗ್ ಕಾರ್ಡ್ ಹಿಂದುಗಡೆ ಐ ಲವ್ ಯೂ ಎಂದು ಬರೆದ ಅಕ್ಷರ ಮಾತ್ರ ಕಾಣಿಸುತ್ತಿತ್ತು. ಫೋನ್ ನಂಬರ್ ಇರುವ ಜಾಗದಲ್ಲಿ ಕೆಂಪು ಬಣ್ಣದಿಂದ ಚಿತ್ತು ಮಾಡಲಾಗಿತ್ತು. ಬೇಸರವಾದರೂ ಐ ಲವ್ ಯೂ ಎಂಬ ಅಕ್ಷರ ಮನಸ್ಸಿಗ್ಯಾಕೋ ಮುದು ನೀಡಿತ್ತು. ಅದು ಅಲ್ಲದೇ, ಆ ತಂಪು ಕಂಗಳ ಹುಡುಗನ ಮುಖ ಕಣ್ಮುಂದೆ ಮೂಡಿತ್ತು. ಮತ್ತೆಂದೂ ಅವನು ನನ್ನ ಮುಂದೆ ಬರಲಿಲ್ಲ. ಕಾಲೇಜಿನ ಕೊನೆಯ ದಿನದವರೆಗೂ ಅವನನ್ನು ಮತ್ತೆ ನೋಡುವೆನೆಂಬ ಭರವಸೆಯಲ್ಲಿದ್ದೆ. ಕೊನೆಗೂ ಅದು ಈಡೇರಲೇ ಇಲ್ಲ. ಯಾರವನು, ಯಾಕೆ ಹೀಗೆ ಬಂದು ಹಾಗೇ ಹೋದ ಎಂಬುದು ಇಂದಿಗೂ ಪ್ರಶ್ನಾತೀತವಾಗಿಯೇ ಉಳಿದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ