ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಬಿಜೆಪಿಗೆ ಆಡಳಿತ ವಿರೋಧಿ ಅಲೆ ಸವಾಲು ಎದುರಾಗಿದೆ.
ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಆಂತರಿಕ ಸಮೀಕ್ಷೆ ನಡೆಸಿತ್ತು. ಈ ಪೈಕಿ ಗೆದ್ದ 15 ಬಿಜೆಪಿ ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಆಡಳಿತ ವಿರೋಧಿ ಅಲೆ ವ್ಯಕ್ತವಾಗಿದೆ.
ರಸ್ತೆಗುಂಡಿ, ಮಳೆ ಪ್ರವಾಹ, ಮಳೆ ಹಾನಿ, ಒಳಚರಂಡಿ ಅವ್ಯವಸ್ಥೆ, ಫುಟ್ಪಾತ್, ಟ್ರಾಫಿಕ್ ಜ್ಯಾಮ್ ಸಮಸ್ಯೆಯಿಂದ ಜನ ತತ್ತರಿಸುವ ವಿಚಾರ ತಿಳಿದು ಬಂದಿದೆ.
ಮಳೆ ನಿಂತ ಕೂಡಲೇ ಚುನಾವಣೆ ಸಮೀಪ ಆತುರಾತುರವಾಗಿ ಹಲವು ಕಾಮಗಾರಿಗಳನ್ನು ಬಿಬಿಎಂಪಿ ಪೂರ್ಣಗೊಳಿಸಿದೆ. ಆದರೆ ಪೂರ್ಣಗೊಳಿಸಿದ ಕಾಮಗಾರಿಗಳು ಸರಿಯಾಗಿ ನಡೆಯದ ಬಗ್ಗೆ ಜನರ ಅಸಮಾಧಾನ ಇರುವುದು ಸಮೀಕ್ಷೆಯಲ್ಲಿ ಗೊತ್ತಾಗಿದೆ.
ಈ ಕಾರಣಕ್ಕೆ ಜನಾಕ್ರೋಶ ತಣಿಸಲು ಬೆಂಗಳೂರಿಗೆ ಮೋದಿ ಅವರನ್ನು ಪದೇ ಪದೇ ಕರೆ ತರಲು ಬಿಜೆಪಿ ಪ್ಲ್ಯಾನ್ ಮಾಡಿದೆ. ಸೋಮವಾರದ ಏರೋ ಇಂಡಿಯಾ ಶೋ ಉದ್ಘಾಟನಾ ಭಾಷಣದಲ್ಲಿ ಮೋದಿ ಡಬಲ್ ಎಂಜಿನ್ ಸರ್ಕಾರದ ಸಾಧನೆಯನ್ನು ಬಣ್ಣಿಸುವ ಸಾಧ್ಯತೆಯಿದೆ.