ಬೆಂಗಳೂರು : ಕೋವಿಡ್ ಸೋಂಕನ್ನು ಲಸಿಕೆಯ ಬದಲಿಗೆ ಮಾತ್ರೆಗಳ ಮೂಲಕ ಹತೋಟಿಗೆ ತರುವ ಬಗ್ಗೆ ಸಂಶೋಧನೆ ನಡೆಯುತ್ತಿದ್ದು,
ಪ್ಯಾಕ್ಸ್ಲೋವಿಡ್ ಹಾಗೂ ಮೊಲ್ನುಪೆರಾವಿರ್ ಎನ್ನುವ ಎರಡು ಮಾತ್ರೆಗಳ ಪ್ರಯೋಗ ಹಲವು ದೇಶಗಳಲ್ಲಿ ನಡೆಯುತ್ತಿದೆ. ಮುಂದಿನ ಆರು ತಿಂಗಳೊಳಗೆ ಈ ಎರಡು ಮಾತ್ರೆಗಳು ದೇಶದಲ್ಲಿ ಲಭ್ಯವಾಗುವ ಸಾಧ್ಯತೆ ಇದ್ದು, ಈಗಾಗಲೇ ಅಮೆರಿಕ ಮತ್ತು ಇಂಗ್ಲೆಂಡ್ ಎರಡು ಮತ್ತು ಮೂರನೇ ಹಂತದ ಪರೀಕ್ಷೆಗಳನ್ನು ನಡೆಸಿವೆ.
ಫೈಜರ್ ಕಂಪನಿಯು ಪ್ಯಾಕ್ಸ್ಲೋವಿಡ್ ಎನ್ನುವ ಮಾತ್ರೆಗೆ ಪೇಟೆಂಟ್ ಪಡೆದಿದೆ. ಇದು ರಿಟೊನಾವಿರ್ ಮಾತ್ರೆಯ ರೂಪಾಂತರ. ರಿಟೊನಾವಿರ್ ಅನ್ನು 2019ರಲ್ಲಿ ಎಚ್ಐವಿ ಸೋಂಕಿತರ ಮೇಲೆ ಜೈಪುರದಲ್ಲಿ ವೈದ್ಯರೊಬ್ಬರು ಪ್ರಯೋಗ ಮಾಡಿದ್ದರು. ಇದು ಪರಿಣಾಮಕಾರಿಯಾಗದ ಹಿನ್ನೆಲೆಯಲ್ಲಿ ಹಿಂಪಡೆಯಲಾಯಿತು. ಈಗ ಈ ಮಾತ್ರೆಗೆ ಇನ್ನೊಂದು ಮಾತ್ರೆಯನ್ನು ಸೇರಿಸಿ ಪ್ಯಾಕ್ಸ್ಲೋವಿಡ್ ಮಾತ್ರೆಯನ್ನು ಪರಿಚರಿಸಲಾಗುತ್ತಿದೆ. ಇದು ಒಂದು ವೈರಸ್ ಅನ್ನು ಎರಡು ವೈರಸ್ ಆಗಿ ಬದಲಾಗುವುದನ್ನು ತಪ್ಪಿಸುತ್ತದೆ.