ಮೊದಲಿಗೆ ಬಟಾಣಿಯನ್ನು 6-8 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ 2-3 ಬಾರಿ ಅವುಗಳನ್ನು ಚೆನ್ನಾಗಿ ತೊಳೆದು ಪಕ್ಕದಲ್ಲಿಡಿ. ಕ್ಯಾರೇಟ್ ಬೀನ್ಸ್, ಬೀಟ್‌ರೂಟ್‌ಗಳನ್ನು ಸಣ್ಣಗೆ ಹೆಚ್ಚಿಕೊಳ್ಳಿ ತದನಂತರ ಈರುಳ್ಳಿ, ಕೊತ್ತಂಬರಿ ಸೊಪ್ಪು, ಕರಿಬೇವಿನ ಎಸಳು, ಹಸಿಮೆಣಸನ್ನು ಕೂಡ ಸಣ್ಣಗೆ ಹೆಚ್ಚಿಕೊಳ್ಳಿ. ಆಲೂಗಡ್ಡೆ, ನೆನೆಸಿದ ಬಟಾಣಿ, ಕತ್ತರಿಸಿಟ್ಟುಕೊಂಡ ತರಕಾರಿಗಳನ್ನು ಕುಕ್ಕರ್‌ನಲ್ಲಿ ಸಾಕಷ್ಟು ನೀರು ಮತ್ತು ಸ್ವಲ್ಪ ಉಪ್ಪು ಹಾಕಿ ಬೇಯಲು ಇಡಿ. (3 ವಿಶಲ್ ಸಾಕು) ಕುಕ್ಕರ್ ತಣಿದ ಒಡನೆ ಆಲೂಗಡ್ಡೆ ಮತ್ತು ಇತರ ತರಕಾರಿಗಳನ್ನು ಬಸಿದುಕೊಂಡು ಒಂದು ಪಾತ್ರೆಗೆ ಹಾಕಿ. ನಂತರ ಒಂದು ಪಾತ್ರೆಯನ್ನು ತೆಗೆದುಕೊಳ್ಳಿ. ಅದರಲ್ಲಿ ಆಲೂಗಡ್ಡೆಯ ಹೊರಭಾಗದ ಸಿಪ್ಪೆಯನ್ನು ತೆಗೆದು ಅದನ್ನು ಚೆನ್ನಾಗಿ ಹಿಸುಕಿಕೊಳ್ಳಿ ನಂತರ ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಮೊದಲಿಗೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಹುರಿದುಕೊಳ್ಳಿ ಅದಕ್ಕೆ ಕತ್ತರಿಸಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಕರಿಬೇವಿನೆಲೆ, ಇಂಗು, ಅರಶಿನ, ಹಸಿಮೆಣಸನ್ನು ಹಾಕಿ 3-4 ನಿಮಿಷಗಳ ಕಾಲ ಮಂದ ಉರಿಯಲ್ಲಿ ಹುರಿದುಕೊಳ್ಳಿ.
ನಂತರ ಗರಮ್ ಮಸಾಲಾವನ್ನು ಇದಕ್ಕೆ ಹಾಕಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ ಈಗ ಮುಂಚಿತವಾಗಿ ಹಿಸುಕಿಕೊಂಡಿರುವ ತರಕಾರಿಗಳು, ಆಲೂಗಡ್ಡೆ, ಬಟಾಣಿ, ಉಪ್ಪು,ಲಿಂಬೆ ರಸ, ಮೆಣಸಿನ ಪುಡಿಯನ್ನು ಚೆನ್ನಾಗಿ ಮಿಶ್ರ ಮಾಡಿಕೊಂಡು 1-2 ನಿಮಿಷಗಳ ಕಾಲ ಹುರಿಯಿರಿ. ತದನಂತರ ಒಂದು ಪಾತ್ರೆಗೆ ಕಡಲೆ ಪುಡಿ, ಇಂಗು, ಮೆಣಸಿನ ಪುಡಿ, ಅಕ್ಕಿ ಪುಡಿ, ಸ್ವಲ್ಪ ಬೇಕಿಂಗ್ ಪೌಡರ್ ಮತ್ತು ಬೇಕಾದಷ್ಟು ನೀರನ್ನು ಹಾಕಿಕೊಂಡು ಸ್ವಲ್ಪ ದಪ್ಪನೆಯ ಹಿಟ್ಟನ್ನಾಗಿ ತಯಾರಿಸಿಕೊಳ್ಳಿ. ಇನ್ನು ಬಾಣಲೆಯಲ್ಲಿ ಕರಿಯಲು ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ, ನಂತರ ಈ ತರಕಾರಿ ಮಿಶ್ರಣವನ್ನು ಉಂಡೆ ಮಾಡಿಕೊಂಡು ಕಡಲೆ ಹಿಟ್ಟಿಗೆ ಮುಳುಗಿಸಿ ಮತ್ತು ಕರಿಯುವ ಎಣ್ಣೆಗೆ ಇದನ್ನು ಹಾಕಿ. ಬೋಂಡಾದ ಎರಡೂ ಬದಿಗಳನ್ನು ಚೆನ್ನಾಗಿ ಕರಿದುಕೊಳ್ಳಿ. ತರಕಾರಿ ಬೋಂಡಾ ಸವಿಯಲು ಸಿದ್ಧವಾಗಿದೆ.
ಕೆಚಪ್ ಅಥವಾ ಚಟ್ನಿ ಕಾಂಬಿನೇಶನ್ ಇದಕ್ಕೆ ಉತ್ತಮವಾಗಿರುತ್ತದೆ.