ಬಾಳೆಹಣ್ಣು ಸಾರ್ವಕಾಲಿಕವಾಗಿ ಸಿಗುವ ಹಣ್ಣು. ಈ ಹಣ್ಣಿನಲ್ಲಿ ಪೋಷಕಾಂಶಗಳು ಹೇರಳವಾಗಿರುತ್ತವೆ. ಮತ್ತು ಪೂಜೆಗಳಲ್ಲಿ ಮತ್ತು ಹಬ್ಬಗಳಲ್ಲಿ ಖಾದ್ಯಗಳನ್ನು ತಯಾರಿಸುವಾಗ ಬಾಳೆಹಣ್ಣು ಮುಂಚೂಣಿಯಲ್ಲಿದೆ. ಇದರಿಂದ ಬಗೆಬಗೆಯಯ ಖಾದ್ಯಗಳನ್ನು ತಯಾರಿಸಬಹುದು. ಅದರಲ್ಲಿ ಹಲ್ವಾನೂ ಒಂದು. ಬಾಳೆಹಣ್ಣಿನ ಹಲ್ವಾವನ್ನು ಸುಲಭವಾಗಿ ತಯಾರಿಸಬಹುದು. ನೀವೂ ಒಮ್ಮೆ ಟ್ರೈ ಮಾಡಿ ರುಚಿ ಸವಿಯಿರಿ..
ತಯಾರಿಸಲು ಬೇಕಾಗುವ ಸಾಮಗ್ರಿಗಳು :
* ಬಾಳೆಹಣ್ಣು 5 ರಿಂದ 6
* ಸಕ್ಕರೆ 1/2 ಕಪ್
* ತುಪ್ಪ 1/2 ಕಪ್
* ಸ್ವಲ್ಪ ಗೋಡಂಬಿ ( ಚಿಕ್ಕದಾಗಿ ಕತ್ತರಿಸಿಟ್ಟುಕೊಳ್ಳಬೇಕು)
* ಏಲಕ್ಕಿ ಪುಡಿ 1/4 ಟೀ ಚಮಚ
ತಯಾರಿಸುವ ವಿಧಾನ :
ಮೊದಲು ಬಾಳೆಹಣ್ಣನ್ನು ಸಿಪ್ಪೆ ತೆಗೆದು ನುಣ್ಣಗೆ ಪೇಸ್ಟ್ ಮಾಡಿಕೊಳ್ಳಬೇಕು. ನಂತರ ದಪ್ಪ ತಳ ಇರುವ ಪಾತ್ರೆಯಲ್ಲಿ ಕಾಲು ಕಪ್ ತುಪ್ಪವನ್ನು ಹಾಕಿ ಗೋಡಂಬಿಯನ್ನು ಹುರಿದಿಟ್ಟುಕೊಳ್ಳಬೇಕು. ನಂತರ ಅದೇ ತುಪ್ಪಕ್ಕೆ ಈಗಾಗಲೇ ಮಾಡಿಕೊಂಡ ಬಾಳೆಹಣ್ಣಿನ ಪೇಸ್ಟ್, ಸಕ್ಕರೆಯನ್ನು ಹಾಕಿ ಮಿಶ್ರಣ ಗಟ್ಟಿಯಾಗುವವರೆಗೆ ಕೈಯಾಡಿಸುತ್ತಾ ಇರಬೇಕು. ನಂತರ ಇದಕ್ಕೆ ಏಲಕ್ಕಿ ಪುಡಿಯನ್ನು ಮತ್ತು ಉಳಿದಿರುವ ತುಪ್ಪವನ್ನೂ ಹಾಕಬೇಕು. ನಂತರ ಸ್ಪಲ್ಪ ತುಪ್ಪ ಸವರಿದ ತಟ್ಟೆಗೆ ಆ ಮಿಶ್ರಣವನ್ನು ಹಾಕಿ ಸಮತಟ್ಟಾಗಿ ತಟ್ಟಬೇಕು. ಅದು ಆರಿದ ನಂತರ ಅದನ್ನು ಬೇಕಾದ ಆಕಾರಕ್ಕೆ ಕತ್ತರಿಸಿದರೆ ರುಚಿಯಾದ ಬಾಳೆಹಣ್ಣಿನ ಹಲ್ವಾ ಸವಿಯಲು ಸಿದ್ಧ.