ಚಿಕ್ಕ ಮಕ್ಕಳು, ಯುವಕರು, ವಯಸ್ಸಾದವರೆನ್ನದೆ ಎಲ್ಲರೂ ಸೊಪ್ಪು ಎಂದರೆ ಮೂಗು ಮುರಿಯುತ್ತಾರೆ. ಆದರೆ ಸೊಪ್ಪುಗಳಲ್ಲಿ ಅಪಾರ ಪೌಷ್ಠಿಕಾಂಶಗಳು, ಕಬ್ಬಿಣಾಂಶ ಮತ್ತು ವಿಟಮಿನ್‌ಗಳಿರುವುದರಿಂದ ಅದನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು.
ಚಿಕ್ಕ ಮಕ್ಕಳೂ ಕೂಡಾ ಇಷ್ಟಪಟ್ಟು ಸೊಪ್ಪನ್ನು ತಿನ್ನುವಂತೆ ಮಾಡಲು ಸೊಪ್ಪುಗಳ ಪಕೋಡಾವನ್ನು ಮಾಡಿ ನೋಡಬಹುದು. ಇದು ರುಚಿಕರವೂ ಆರೋಗ್ಯದ ದೃಷ್ಟಿಯಿಂದ ಉತ್ತಮವೂ ಆಗಿರುತ್ತದೆ. ಇದನ್ನು ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳುವ ಆಸಕ್ತಿಯಿದ್ದಲ್ಲಿ ಈ ಲೇಖನವನ್ನು ಓದಿ.
1. ಪಾಲಾಕ್ ಸೊಪ್ಪಿನ ಪಕೋಡಾ
ಬೇಕಾಗುವ ಸಾಮಗ್ರಿಗಳು:
ಪಾಲಾಕ್ ಸೊಪ್ಪು - 1 ಕಟ್ಟು
ಕಡಲೆ ಹಿಟ್ಟು - 1 ಕಪ್
ಅಕ್ಕಿ ಹಿಟ್ಟು - 2-3 ಚಮಚ
ಓಮಕಾಳು - 1/2 ಚಮಚ
ಶುಂಠಿ - 1/2 ಇಂಚು
ಈರುಳ್ಳಿ - 1
ಕರಿಬೇವು - ಒಂದು ಹಿಡಿ
ಅಚ್ಚಖಾರದ ಪುಡಿ - 2 ಚಮಚ
ಉಪ್ಪು - ರುಚಿಗೆ
ಎಣ್ಣೆ - ಕರಿಯಲು
ಮಾಡುವ ವಿಧಾನ:
* ಮೊದಲು ಪಾಲಾಕ್ ಸೊಪ್ಪು ಮತ್ತು ಈರುಳ್ಳಿಯನ್ನು ತೊಳೆದು ಮಧ್ಯಮ ಗಾತ್ರದಲ್ಲಿ ಹೆಚ್ಚಿಕೊಳ್ಳಿ. ನಂತರ ಶುಂಠಿ ಮತ್ತು ಕರಿಬೇವನ್ನು ಸಹ ಚಿಕ್ಕದಾಗಿ ಹೆಚ್ಚಿಕೊಳ್ಳಿ.
* ಒಂದು ಬೌಲ್ ತೆಗೆದುಕೊಂಡು ಅದರಲ್ಲಿ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಅಚ್ಚಖಾರದ ಪುಡಿ, ಓಮಕಾಳು, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಹೆಚ್ಚಿದ ತರಕಾರಿಗಳನ್ನು ಹಾಕಿ ಮಿಕ್ಸ್ ಮಾಡಿ. ನಂತರ ಅಗತ್ಯವಿರುವಷ್ಟು ನೀರನ್ನು ಸೇರಿಸಿ ಪಕೊಡಾ ಮಿಶ್ರಣವನ್ನು ತಯಾರಿಸಿಕೊಳ್ಳಿ.
* ಒಂದು ಬಾಣಲೆಯನ್ನು ಸ್ಟೌ ಮೇಲಿಟ್ಟು ಅಗತ್ಯವಿರುವಷ್ಟು ಎಣ್ಣೆಯನ್ನು ಹಾಕಿ ಅದು ಕಾದ ನಂತರ ಹಿಟ್ಟನ್ನು ಚಿಕ್ಕ ಚಿಕ್ಕ ಚೂರುಗಳಾಗಿ ಎಣ್ಣೆಯಲ್ಲಿ ಬಿಟ್ಟು ಚೆನ್ನಾಗಿ ಕರಿದರೆ ಪಾಲಾಕ್ ಸೊಪ್ಪಿನ ಪಕೋಡಾ ರೆಡಿ.
2. ಮೆಂತೆ ಸೊಪ್ಪಿನ ಪಕೋಡಾ
ಬೇಕಾಗುವ ಸಾಮಗ್ರಿಗಳು:
ಮೆಂತೆ ಸೊಪ್ಪು - 2 ಕಪ್
ಈರುಳ್ಳಿ - 2
ಕಡಲೆ ಹಿಟ್ಟು - 1 ಕಪ್
ಅಕ್ಕಿ ಹಿಟ್ಟು - 1/4 ಕಪ್
ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 1 ಚಮಚ
ಅಚ್ಚಖಾರದ ಪುಡಿ - 2 ಚಮಚ
ಕೊತ್ತಂಬರಿ ಸೊಪ್ಪು - 1/4 ಕಟ್ಟು
ಜೀರಿಗೆ ಪುಡಿ - 1/2 ಚಮಚ
ಉಪ್ಪು - ರುಚಿಗೆ
ಎಣ್ಣೆ - ಕರಿಯಲು
ಮಾಡುವ ವಿಧಾನ:
* ಮೆಂತೆ ಸೊಪ್ಪನ್ನು ತೊಳೆದಿಟ್ಟುಕೊಳ್ಳಿ. ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪನ್ನು ತೊಳೆದು ಚೆನ್ನಾಗಿ ಹೆಚ್ಚಿಟ್ಟುಕೊಳ್ಳಿ.
* ಒಂದು ಬೌಲ್ ತೆಗೆದುಕೊಂಡು ಅದರಲ್ಲಿ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಅಚ್ಚಖಾರದ ಪುಡಿ, ಜೀರಿಗೆ ಪುಡಿ, ಉಪ್ಪು, ಮೆಂತೆ ಸೊಪ್ಪು ಮತ್ತು ಹೆಚ್ಚಿದ ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಮಿಕ್ಸ್ ಮಾಡಿ. ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ಕಲಸಿದರೆ ಪಕೋಡಾ ಹಿಟ್ಚು ರೆಡಿಯಾಗುತ್ತದೆ.
* ಒಂದು ಬಾಣಲೆಯನ್ನು ಸ್ಟೌ ಮೇಲಿಟ್ಟು ಅಗತ್ಯವಿರುವಷ್ಟು ಎಣ್ಣೆಯನ್ನು ಹಾಕಿ ಅದು ಕಾದ ನಂತರ ಹಿಟ್ಟನ್ನು ಚಿಕ್ಕ ಚಿಕ್ಕ ಚೂರುಗಳಾಗಿ ಎಣ್ಣೆಯಲ್ಲಿ ಬಿಟ್ಟು ಚೆನ್ನಾಗಿ ಕರಿದರೆ ಮೆಂತೆ ಸೊಪ್ಪಿನ ಪಕೋಡಾ ರೆಡಿ.
3. ನುಗ್ಗೆ ಸೊಪ್ಪಿನ ಪಕೋಡಾ
ಬೇಕಾಗುವ ಸಾಮಗ್ರಿಗಳು:
ನುಗ್ಗೆ ಸೊಪ್ಪು - 2 ಕಪ್
ಕಡಲೆ ಹಿಟ್ಟು - 1 ಕಪ್
ಅಕ್ಕಿ ಹಿಟ್ಟು - 1/4 ಕಪ್
ಓಮಕಾಳು - 1/2 ಚಮಚ
ಶುಂಠಿ - 1/2 ಇಂಚು
ಈರುಳ್ಳಿ - 2
ಕೊತ್ತಂಬರಿ ಸೊಪ್ಪು - 1/4 ಕಟ್ಟು
ಅಚ್ಚಖಾರದ ಪುಡಿ - 2 ಚಮಚ
ಉಪ್ಪು - ರುಚಿಗೆ
ಎಣ್ಣೆ - ಕರಿಯಲು
ಮಾಡುವ ವಿಧಾನ:
* ಎಳೆಯ ನುಗ್ಗೆ ಸೊಪ್ಪನ್ನು ತೊಳೆದಿಟ್ಟುಕೊಳ್ಳಿ. ಈರುಳ್ಳಿ, ಶುಂಠಿ ಮತ್ತು ಕೊತ್ತಂಬರಿ ಸೊಪ್ಪನ್ನು ತೊಳೆದು ಚೆನ್ನಾಗಿ ಹೆಚ್ಚಿಟ್ಟುಕೊಳ್ಳಿ.
* ಒಂದು ಬೌಲ್ ತೆಗೆದುಕೊಂಡು ಅದರಲ್ಲಿ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಅಚ್ಚಖಾರದ ಪುಡಿ, ಉಪ್ಪು, ನುಗ್ಗೆ ಸೊಪ್ಪು, ಹೆಚ್ಚಿದ ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಮಿಕ್ಸ್ ಮಾಡಿ. ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ಕಲಸಿದರೆ ಪಕೋಡಾ ಹಿಟ್ಚು ರೆಡಿಯಾಗುತ್ತದೆ.
* ಒಂದು ಬಾಣಲೆಯನ್ನು ಸ್ಟೌ ಮೇಲಿಟ್ಟು ಅಗತ್ಯವಿರುವಷ್ಟು ಎಣ್ಣೆಯನ್ನು ಹಾಕಿ ಅದು ಕಾದ ನಂತರ ಹಿಟ್ಟನ್ನು ಚಿಕ್ಕ ಚಿಕ್ಕ ಚೂರುಗಳಾಗಿ ಎಣ್ಣೆಯಲ್ಲಿ ಬಿಟ್ಟು ಚೆನ್ನಾಗಿ ಕರಿದರೆ ನುಗ್ಗೆ ಸೊಪ್ಪಿನ ಪಕೋಡಾ ರೆಡಿ.
ಸೊಪ್ಪಿನ ಪಕೋಡಾಗಳನ್ನು ಸಂಜೆ ಟೀ ಅಥವಾ ಕಾಫಿಯ ಸಮಯದಲ್ಲಿ ಕೊತ್ತಂಬರಿ ಸೊಪ್ಪಿನ ಚಟ್ನಿ ಅಥವಾ ಟೊಮೆಟೋ ಸಾಸ್‌ನೊಂದಿಗೆ ಸವಿಯಲು ರುಚಿಯಾಗಿರುತ್ತದೆ. ನೀವೂ ಒಮ್ಮೆ ಇದನ್ನು ಮಾಡಿ ನೋಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.