Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹೀರೆಕಾಯಿ ಮತ್ತು ಬೇರುಹಲಸು(ದೇವಿ ಹಲಸು) ಕಾಯಿಯ ಬಜ್ಜಿ ಮಾಡಿ ನೋಡಿ..!!

ಹೀರೆಕಾಯಿ ಮತ್ತು ಬೇರುಹಲಸು(ದೇವಿ ಹಲಸು) ಕಾಯಿಯ ಬಜ್ಜಿ ಮಾಡಿ ನೋಡಿ..!!

ನಾಗಶ್ರೀ ಭಟ್

ಬೆಂಗಳೂರು , ಗುರುವಾರ, 4 ಜನವರಿ 2018 (16:01 IST)
ಹೀರೆಕಾಯಿ ಅಧಿಕ ಪೌಷ್ಠಿಕಾಂಶ ಮತ್ತು ಫೈಬರ್ ಅಂಶಗಳನ್ನು ಹೊಂದಿದ್ದು ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದಾಗಿದೆ. ಇದರಿಂದ ಬಜ್ಜಿ, ಸಾಂಬಾರ್, ಚಟ್ನಿ, ಪಲ್ಯ ಮುಂತಾದ ಪದಾರ್ಥಗಳನ್ನು ಮಾಡಬಹುದು. 
ಕನ್ನಡದಲ್ಲಿ ಬೇರು ಹಲಸು ಎಂದು ಕರೆಯುವ ಇದನ್ನು ದೇವಿ ಹಲಸು ಎಂದೂ ಕರೆಯುತ್ತಾರೆ. ಇದರಲ್ಲಿ ಬೀಜಗಳು ಇರುವುದಿಲ್ಲ. ಈ ಹಲಸಿನ ಮರದ ಬೇರಿನಿಂದಲೇ ಇನ್ನೊಂದು ಗಿಡ ಹುಟ್ಟಿಕೊಳ್ಳುತ್ತದೆ. ಆದ್ದರಿಂದ ಇದನ್ನು ಬೇರು ಹಲಸು ಎಂದು ಕರೆಯುತ್ತಾರೆ. 
 
ಇದನ್ನು ಬಳಸಿ ನಾವು ಪಲ್ಯ, ಸಾಂಬಾರ್, ಬಜ್ಜಿ, ಬೋಂಡಾ, ಚಿಪ್ಸ್ ಮತ್ತು ಇನ್ನೂ ಅನೇಕ ಪದಾರ್ಥಗಳನ್ನು ಮಾಡಬಹುದು. ಹೀರೆಕಾಯಿ ಮತ್ತು ಬೇರು ಹಲಸಿನ ಬಜ್ಜಿ ಮಾಡುವುದು ಹೇಗೆ ಎಂಬುದನ್ನು ತಿಳಿಯುವ ಕುತೂಹಲವಿದ್ದರೆ ಈ ಲೇಖನವನ್ನು ಓದಿ.
 
ಬೇಕಾಗುವ ಸಾಮಗ್ರಿಗಳು:
 
ಹೀರೆಕಾಯಿ - 1
ದೇವಿ ಹಲಸು - 1/2
ಕಡಲೆ ಹಿಟ್ಟು - 1 1/2 ಕಪ್
ಅಕ್ಕಿ ಹಿಟ್ಟು - 1/2 ಕಪ್
ಓಮಕಾಳು - 1 ಚಮಚ
ಅರಿಶಿಣ ಪುಡಿ - 1/2 ಚಮಚ
ಇಂಗು - 1/4 ಚಮಚ
ಅಚ್ಚಖಾರದ ಪುಡಿ - 2-3 ಚಮಚ
ಉಪ್ಪು - ರುಚಿಗೆ
ಅಡುಗೆ ಸೋಡಾ - 1/4 ಚಮಚ (ಅಗತ್ಯವಿದ್ದಲ್ಲಿ ಮಾತ್ರ)
 
ಮಾಡುವ ವಿಧಾನ:
 
ಬೇರು ಹಲಸು ಮತ್ತು ಹೀರೆಕಾಯಿಯ ಸಿಪ್ಪೆ ತೆಗೆದು ಬೇರೆ ಬೇರೆಯಾಗಿ ಸ್ಲೈಸ್‌ಗಳನ್ನು ಮಾಡಿಕೊಳ್ಳಿ. ಬೇರು ಹಲಸನ್ನು ಸ್ವಲ್ಪ ತೆಳ್ಳಗಿನ ಸ್ಲೈಸ್ ಮಾಡಿದರೆ ಉತ್ತಮ. ಬೇರು ಹಲಸಿನ ಸ್ಲೈಸ್‌ಗೆ 1/2 ಚಮಚ ಉಪ್ಪನ್ನು ಹಾಕಿ ಬೆರೆಸಿಟ್ಟುಕೊಳ್ಳಿ. ಒಂದು ಬೌಲ್‌ನಲ್ಲಿ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಅಚ್ಚಖಾರದ ಪುಡಿ, ಇಂಗು, ಅರಿಶಿಣ, ಅಡುಗೆ ಸೋಡಾ, ಓಮಕಾಳು, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅಗತ್ಯವಿರುವಷ್ಟು ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಹಿಟ್ಟನ್ನು ತಯಾರಿಸಿಕೊಳ್ಳಿ. ಈ ಹಿಟ್ಟು ದೋಸೆ ಹಿಟ್ಟಿನ ಹದದಲ್ಲಿರಲಿ.
 
ನಂತರ ಮಧ್ಯಮ ಉರಿಯಲ್ಲಿ ಬಾಣಲೆಯನ್ನು ಸ್ಟೌ ಮೇಲಿಟ್ಟು ಕರಿಯಲು ಅಗತ್ಯವಿರುವಷ್ಟು ಎಣ್ಣೆಯನ್ನು ಹಾಕಿ. ಎಣ್ಣೆಯು ಕಾದಾಗ ಬೇರು ಹಲಸು ಮತ್ತು ಹೀರೆಕಾಯಿಯ ಸ್ಲೈಸ್‌ಗಳನ್ನು ಹಿಟ್ಟಿನಲ್ಲಿ ಡಿಪ್ ಮಾಡಿ ಎಣ್ಣೆಯಲ್ಲಿ ಹಾಕಿ ಕರಿಯಿರಿ. ಹೀಗೆ ಬಜ್ಜಿಯು ಕೆಂಪಗಾದಾಗ ತೆಗೆದರೆ ಹೀರೆಕಾಯಿ ಮತ್ತು ಬೇರು ಹಲಸಿನ ಬಜ್ಜಿ ರೆಡಿ. ಬೇರು ಹಲಸು ಬೇಯಲು ಸ್ವಲ್ಪ ಅಧಿಕ ಸಮಯ ತೆಗೆದುಕೊಳ್ಳುವುದರಿಂದ ಹೀರೆಕಾಯಿ ಮತ್ತು ಬೇರು ಹಲಸನ್ನು ಬೇರೆ ಬೇರೆಯಾಗಿ ಕರಿಯುವುದು ಉತ್ತಮ. ಈ ಬಜ್ಜಿಗಳು ಸಂಜೆಯ ಟೀ ಸಮಯದಲ್ಲಿ ಅಥವಾ ಊಟದ ಸಮಯದಲ್ಲಿ ತಿನ್ನಲು ರುಚಿಯಾಗಿರುತ್ತದೆ. ನೀವೂ ಒಮ್ಮೆ ಈ ಬಜ್ಜಿಗಳನ್ನು ಮಾಡಿ ನೋಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಚೆಟ್ಟಿನಾಡ್‌ ಚಿಕನ್‌ ಸಾಂಬಾರ್‌