ಚಳಿಗಾಲ ಬಂತೆಂದರೆ ಸಾಕು ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲಿ ಒಣಗಿದ ತುಟಿಯ ಸಮಸ್ಯೆಯೂ ಒಂದು. ಇದು ಕೆಲವರಿಗೆ ಚಳಿಗಾಲದಲ್ಲೊಂದೇ ಅಲ್ಲದೇ ಇತರ ದಿನಗಳಲ್ಲೂ ಕಾಣಿಸಿಕೊಳ್ಳುತ್ತದೆ.
ಒಣಗಿದ ತುಟಿಗಳೂ ಮುಖದ ಸೌಂದರ್ಯವನ್ನು ಕೆಡಿಸಿಬಿಡುತ್ತವೆ. ಹಾಗಾದರೆ ಈ ಒಣಗಿದ ತುಟಿಗಳಿಂದ ಮುಕ್ತಿ ಹೊಂದುವುದು ಹೇಗೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ನಿಮಗೂ ಇದ್ದರೆ ಈ ಕೆಳಗಿನ ಸಲಹೆಗಳನ್ನು ನೋಡಿ.
1 ಚಮಚ ಸಕ್ಕರೆಗೆ 1/2 ಚಮಚ ಜೇನನ್ನು ಸೇರಿಸಿ ಆ ಮಿಶ್ರಣವನ್ನು ನಿಮ್ಮ ತುಟಿಗಳಿಗೆ ಹಚ್ಚಿಕೊಳ್ಳಿ. ನಂತರ ನಿಮ್ಮ ತುದಿ ಬೆರಳುಗಳಿಂದ ನಿಧಾನವಾಗಿ ರಬ್ ಮಾಡಿ. ಇದು ನಿಮ್ಮ ತುಟಿಯ ಮೇಲಿನ ಸತ್ತ ಜೀವಕೋಶಗಳನ್ನು ಹೋಗಲಾಡಿಸಿ ಅದನ್ನು ಮೃದುವಾಗಿಸುತ್ತದೆ.
ಜೇನು ನೈಸರ್ಗಿಕವಾದ ಮಾಯಿಶ್ಚುರೈಸರ್ ಆಗಿರುವುದರಿಂದ ದಿನವೂ ಹಲವು ಬಾರಿ ಅದನ್ನು ತುಟಿಗೆ ಸವರುವುದರಿಂದ ಅದು ನಿಮ್ಮ ಒಣಗಿದ ತುಟಿಗಳಿಂದ ಮುಕ್ತಿ ನೀಡುತ್ತದೆ.
ದಿನವೂ ನಿಮ್ಮ ತುಟಿಗೆ ಮಿಲ್ಕ್ ಕ್ರೀಮ್ ಅನ್ನು ಹಚ್ಚಿ 10-15 ನಿಮಿಷಗಳಕಾಲ ಬಿಡುವುದರಿಂದ ಒಣ ತುಟಿಗಳಿಂದ ಮುಕ್ತರಾಗಬಹುದು.
ನೀವು ಜೇನು ಮತ್ತು ಗ್ಲಿಸರಿನ್ ಅನ್ನು ಸೇರಿಸಿ ಅದನ್ನು ದಿನವೂ ಮಲಗುವ ಮುನ್ನ ನಿಮ್ಮ ತುಟಿಗೆ ಹಚ್ಚುವ ಮೂಲಕ ಮೃದುವಾದ ತುಟಿಯನ್ನು ನೀವು ಹೊಂದಬಹುದು.
ಗುಲಾಬಿ ಎಸಳುಗಳನ್ನು ಹಾಲಿನಲ್ಲಿ ಸ್ವಲ್ಪ ಸಮಯ ನೆನೆಸಿ ಅದನ್ನು ನುಣ್ಣಗೆ ರುಬ್ಬಿ ದಿನವೂ 2-3 ಬಾರಿ ನಿಮ್ಮ ತುಟಿಗೆ ಹಚ್ಚುವುದರಿಂದ ನೀವು ತುಟಿಗಳ ರಂಗನ್ನು ಹೆಚ್ಚಿಸಿಕೊಳ್ಳಬಹುದು ಮತ್ತು ಅದು ನಿಮ್ಮ ತುಟಿಗಳಿಗೆ ಮಾಯಿಶ್ಚುರೈಸರ್ ಅನ್ನು ಒದಗಿಸುತ್ತದೆ.
ತೆಂಗಿನೆಣ್ಣೆ ಅಥವಾ ಆಲಿವ್ ಎಣ್ಣೆಯನ್ನು ದಿನವೂ 3-4 ಬಾರಿ ಹಚ್ಚುವುದರಿಂದ ನೀವು ಒಣಗಿದ ತುಟಿಗಳಿಂದ ಮುಕ್ತಿ ಹೊಂದಬಹುದು. ತೆಂಗಿನೆಣ್ಣೆ ನೈಸರ್ಗಿಕವಾದ ಮಾಯಿಶ್ಚುರೈಸರ್‌ನ ಅಂಶವನ್ನು ಹೊಂದಿದೆ.
ರಾತ್ರಿ ಮಲಗುವ ಮುನ್ನ ಅಲೋವೇರಾದ ಎಲೆಯಿಂದ ಸ್ವಲ್ಪ ಜೆಲ್ ಅನ್ನು ತೆಗೆದುಕೊಂಡು ಅದನ್ನು ನಿಮ್ಮ ತುಟಿಗಳಿಗೆ ಹಚ್ಚಿ. ಇದು ನಿಮ್ಮ ತುಟಿಗಳ ಮೇಲಿರುವ ಸತ್ತ ಜೀವಕೋಶಗಳನ್ನು ತೆಗೆದುಹಾಕಿ ತುಟಿಗಳನ್ನು ಮೃದುವಾಗಿಸುತ್ತದೆ.
ದಿನವೂ ರಾತ್ರಿ ಮಲಗುವ ಮುನ್ನ ತುಟಿಗಳಿಗೆ ತುಪ್ಪವನ್ನು ಸವರುವುದರಿಂದ ಅದು ನಿಮ್ಮ ಒಣಗಿದ ತುಟಿಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ.
ಈ ಸಲಹೆಗಳನ್ನು ನೀವೂ ಒಮ್ಮೆ ಪ್ರಯತ್ನಿಸಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.