ನಮ್ಮ ದೇಶದಲ್ಲಿ ಉಪ್ಪಿನಕಾಯಿ ಇಲ್ಲದೇ ಊಟ ಪೂರ್ಣಗೊಳ್ಳುವುದೇ ಇಲ್ಲ. ಎಷ್ಟೇ ಬಗೆಯ ಅಡುಗೆಗಳಿದ್ದರೂ ಉಪ್ಪಿನಕಾಯಿ ಬೇಕೆ ಬೇಕು. ಹಲವು ಬಗೆಯ ಉಪ್ಪಿನಕಾಯಿಯನ್ನು ಮಾಡಬಹುದು, ಅದರಲ್ಲಿ ಮಾವಿನಕಾಯಿ ಉಪ್ಪಿನಕಾಯಿ ಜನಪ್ರಿಯವಾದುದು. ಇದನ್ನು ನಾವು ಸರಿಯಾಗಿ ಮಾಡಿ ಬಳಸಿದರೆ ಒಂದು ವರ್ಷದವರೆಗೂ ಕೆಡದಂತೆ ಇಡಬಹುದು. ಹೇಗೆ ಮಾಡುವುದು ಎಂದು ತಿಳಿದುಕೊಳ್ಳಲು ಇಲ್ಲಿ ನೋಡಿ,
ಬೇಕಾಗುವ ಸಾಮಗ್ರಿಗಳು:
ಮಾವಿನಕಾಯಿ ಹೋಳು - 1 ಕಪ್
ಉಪ್ಪು(ಕಲ್ಲುಪ್ಪು) - ರುಚಿಗೆ
ಅಚ್ಚಖಾರದ ಪುಡಿ - 3-4 ಚಮಚ
ಎಣ್ಣೆ (ಸಾಸಿವೆ ಎಣ್ಣೆ) - 6-7 ಚಮಚ
ಇಂಗು - ಸ್ವಲ್ಪ
ಅರಿಶಿಣ - 1/2 ಚಮಚ
ಸಾಸಿವೆ - 1 1/2 ಚಮಚ
ಕರಿಬೇವು - 6-7 ಎಲೆಗಳು
ಮಾಡುವ ವಿಧಾನ:
* ಮಾವಿನಕಾಯಿಗಳನ್ನು ತೊಳೆದು ಚೆನ್ನಾಗಿ ಒರೆಸಿ ಒಣಗಿಸಿಕೊಳ್ಳಿ. ನಂತರ ಅದನ್ನು ಚಿಕ್ಕ ಚಿಕ್ಕ ಹೋಳುಗಳಾಗಿ ಮಾಡಿ.
* ಒಂದು ಬೌಲ್‌ನಲ್ಲಿ ಮಾವಿನಕಾಯಿ ಹೋಳು, ಅಚ್ಚಖಾರದ ಪುಡಿ ಮತ್ತು ಅರಿಶಿಣವನ್ನು ಹಾಕಿ. ಅದಕ್ಕೆ ಉಪ್ಪನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ತಯಾರಿಸಿರುವ ಉಪ್ಪಿನ ನೀರನ್ನು ತಣಿಸಿ ಅಗತ್ಯವಿರುವಷ್ಟು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
* ಈಗ ಒಗ್ಗರಣೆಗೆ ರೆಡಿ ಮಾಡಿಕೊಳ್ಳಿ. ಒಂದು ಬಾಣಲೆಗೆ ಎಣ್ಣೆಯನ್ನು ಹಾಕಿ ಬಿಸಿಯಾದ ನಂತರ ಸಾಸಿವೆ, ಇಂಗು ಮತ್ತು ಕರಿಬೇವನ್ನು ಹಾಕಿ. ಸಾಸಿವೆ ಸಿಡಿಯಲು ಆರಂಭಿಸಿದ ತಕ್ಷಣ ಸ್ಟೌ ಆರಿಸಿ ಒಗ್ಗರಣೆಯನ್ನು ಈ ಮೊದಲೇ ರೆಡಿ ಮಾಡಿರುವ ಮಿಶ್ರಣಕ್ಕೆ ಹಾಕಿ ಇನ್ನೊಮ್ಮೆ ಚೆನ್ನಾಗಿ ಮಿಕ್ಸ್ ಮಾಡಿ.
* ತಯಾರಿಸಿದ ಉಪ್ಪಿನಕಾಯನ್ನು ಒಣಗಿಸಿರುವ ಗಾಜಿನ ಬಾಟಲಿಯಲ್ಲಿ ತಂಪಾಗಿರುವ ಸ್ಥಳದಲ್ಲಿ ಇಟ್ಟರೆ ದೀರ್ಘಕಾಲದವರೆಗೆ ಬಾಳಿಕೆ ಬರುತ್ತದೆ.
ತ್ವರಿತವಾಗಿ ತಯಾರಿಸಬಹುದಾದ ಈ ಉಪ್ಪಿನಕಾಯನ್ನು ಮಾವಿನಕಾಯಿಯ ಸೀಸನ್‌ನಲ್ಲಿ ಒಮ್ಮೆ ನೀವೂ ಮಾಡಿಕೊಂಡು ತಿಂದು ನೋಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.