ಕರ್ನಾಟಕದಲ್ಲಿ ಕೋಸಂಬರಿ ಎಂದು ಕರೆಯಲ್ಪಡುವ ಇದು ಹೆಸರು ಬೇಳೆಯ ಸಲಾಡ್ ಆಗಿದೆ. ಇದನ್ನು ಹೆಚ್ಚಾಗಿ ದೇಶದ ಇತರೆಡೆ ರಾಮ ನವಮಿ ಮತ್ತು ನವರಾತ್ರಿ ಸಮಯದಲ್ಲಿ ದೇವರಿಗೆ ನೈವೇದ್ಯವಾಗಿ ಮಾಡುತ್ತಾರೆ.
ಕರ್ನಾಟಕದಲ್ಲಿ ಸುಮಾರು ಎಲ್ಲಾ ಹಬ್ಬಗಳ ದಿನದಂದು ಉಟದಲ್ಲಿ ಇದು ಇದ್ದೇ ಇರುತ್ತದೆ. ಉತ್ತಮ ಪೌಷ್ಠಿಕಾಂಶಗಳನ್ನು ಹೊಂದಿರುವ ಈ ಪದಾರ್ಥ ಆರೋಗ್ಯಕ್ಕೆ ಬಹಳ ಉತ್ತಮವಾದುದಾಗಿದೆ. ಇದನ್ನು ತುಂಬಾ ಸರಳವಾಗಿ ಮಾಡಬಹುದಾಗಿದೆ. ಹೇಗೆ ಮಾಡಬೇಕು ಎಂಬುದನ್ನು ತಿಳಿಯಲು ಇಲ್ಲಿ ನೋಡಿ,
ಬೇಕಾಗುವ ಸಾಮಗ್ರಿಗಳು:
ಹೆಸರು ಬೇಳೆ - 1/2 ಕಪ್
ಕ್ಯಾರೆಟ್ - 1
ಸೌತೇಕಾಯಿ - 1
ಹಸಿಮೆಣಸು - 2
ಕಾಯಿತುರಿ - 1/4 ಕಪ್
ಕೊತ್ತಂಬರಿ ಸೊಪ್ಪು - ಸ್ವಲ್ಪ
ಶುಂಠಿ - 1 ಇಂಚು
ಉಪ್ಪು - ರುಚಿಗೆ
ಸಕ್ಕರೆ - 1 ಚಮಚ
ನಿಂಬೆ ರಸ - 1 ಚಮಚ
ಕರಿಬೇವು - ಸ್ವಲ್ಪ
ಎಣ್ಣೆ - 2 ಚಮಚ
ಉದ್ದಿನ ಬೇಳೆ - 1 ಚಮಚ
ಸಾಸಿವೆ - 1 ಚಮಚ
ಇಂಗು - 1/4 ಚಮಚ
ಒಣ ಮೆಣಸು - 1
ಮಾಡುವ ವಿಧಾನ:
* ಹೆಸರು ಬೇಳೆಯನ್ನು 3-4 ಗಂಟೆ ನೆನೆಸಿಡಿ.
* ಕ್ಯಾರೆಟ್ ಅನ್ನು ತುರಿದಿಟ್ಟುಕೊಳ್ಳಿ ಮತ್ತು ಸೌತೇಕಾಯಿ, ಕೊತ್ತಂಬರಿ ಸೊಪ್ಪು, ಶುಂಠಿ ಮತ್ತು ಹಸಿಮೆಣಸನ್ನು ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಿ.
* ಒಂದು ಬೌಲ್ ತೆಗೆದುಕೊಂಡು ಅದರಲ್ಲಿ ನೀರನ್ನು ತೆಗೆದ ಹೆಸರು ಬೇಳೆ, ತುರಿದ ಕ್ಯಾರೆಟ್, ಹೆಚ್ಚಿದ ಸೌತೇಕಾಯಿ, ಕೊತ್ತಂಬರಿ ಸೊಪ್ಪು, ಹಸಿಮೆಣಸು, ಶುಂಠಿ ಮತ್ತು ಕಾಯಿತುರಿಯನ್ನು ಹಾಕಿ. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು 1 ಚಮಚ ಸಕ್ಕರೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
* ಈಗ ಒಂದು ಚಿಕ್ಕ ಬಾಣಲೆಯಲ್ಲಿ ಒಗ್ಗರಣೆಗೆ ರೆಡಿ ಮಾಡಿ. ಕಾದ ಬಾಣಲೆಗೆ ಎಣ್ಣೆ, ಉದ್ದಿನ ಬೇಳೆ, ಸಾಸಿವೆ, ಮೆಣಸು, ಇಂಗು ಮತ್ತು ಕರಿಬೇವನ್ನು ಕ್ರಮವಾಗಿ ಹಾಕಿ ಬೇಳೆ ಕೆಂಪಗಾದಾಗ ಸ್ಟೌ ಆಫ್ ಮಾಡಿ.
* ಈ ಮೊದಲೇ ರೆಡಿ ಮಾಡಿರುವ ಮಿಶ್ರಣಕ್ಕೆ ಒಗ್ಗರಣೆಯನ್ನು ಮತ್ತು ನಿಂಬೆ ರಸವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ಕೋಸಂಬರಿ ರೆಡಿಯಾಗುತ್ತದೆ.
ಕೋಸಂಬರಿಯನ್ನು ನೀವು ಮೊಳಕೆ ಕಾಳುಗಳಿಂದಲೂ ಮೇಲೆ ತಿಳಿಸಿದ ವಿಧಾನವನ್ನು ಅನುಸರಿಸಿ ಮಾಡಬಹುದು. ಹೆಸರು ಬೇಳೆಯ ಬದಲು ಮೊಳಕೆ ಬರಿಸಿದ ಹೆಸರು ಕಾಳು, ಬೇಯಿಸಿದ ಕಡಲೆಯಿಂದಲೂ ಸಹ ಕೋಸಂಬರಿಯನ್ನು ಮಾಡಬಹುದು. ನೀವೂ ಒಮ್ಮೆ ಪ್ರಯತ್ನಿಸಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.