Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ನವದೆಹಲಿ : ಸುಳ್ಳು ಮತ್ತು ದೇಶದ್ರೋಹದ ಸುದ್ದಿಗಳ ಪ್ರಕಟ ಹಿನ್ನೆಲೆ ಪಾಕಿಸ್ತಾನ ಸೇರಿದಂತೆ ಭಾರತದ ಒಟ್ಟು ಎಂಟು ಯೂಟ್ಯೂಬ್ ಚಾನಲ್ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.
ಐಟಿ ನಿಯಮಗಳು, 2021ರ ಅಡಿಯಲ್ಲಿ ತುರ್ತು ಅಧಿಕಾರವನ್ನು ಬಳಸಿಕೊಂಡು ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಯೂಟ್ಯೂಬ್ ಮೂಲಕ ಸುದ್ದಿ ಪ್ರಕಟಿಸುತ್ತಿದ್ದ ಚಾನಲ್ಗಳನ್ನು ನಿಷೇಧಿಸಿದೆ.
ಲೋಕತಂತ್ರ ಟಿವಿ, U&V ಟಿವಿ, ಎಎಮ್ ರಜ್ವಿ, ಗೌರವಶಾಲಿ ಪವನ್ ಮಿಥಿಲಾಂಚಲ್, Top5TH, ಸರ್ಕಾರಿ ನವೀಕರಣ, ಸಬ್ ಕುಚ್ ದೇಖೋ ಹಾಗೂ ಪಾಕಿಸ್ತಾನ ಮೂಲದ ನ್ಯೂಸ್ ಕಿ ದುನ್ಯಾ ನಿಷೇಧಿತ ಯೂಟ್ಯೂಬ್ ಸುದ್ದಿ ಚಾನಲ್ಗಳಾಗಿವೆ.
114 ಕೋಟಿ ವೀವ್ಸ್ ಮತ್ತು 85 ಲಕ್ಷದ 73 ಸಾವಿರ ಸಬ್ಸ್ಕ್ರೈಬ್ ಹೊಂದಿದ್ದ ಈ ಎಂಟು ಚಾನಲ್ಗಳು ದೇಶದಲ್ಲಿನ ಪ್ರಸ್ತುತ ಬೆಳವಣಿಗೆಗಳ ಬಗ್ಗೆ ತಪ್ಪು ಮಾಹಿತಿ ರವಾನೆ ಮಾಡುತ್ತಿದ್ದವು. ನಕಲಿ ಮತ್ತು ಸಂವೇದನಾಶೀಲ ಥಂಬ್ನೇಲ್ಗಳು, ಸುದ್ದಿ ನಿರೂಪಕರ ಚಿತ್ರಗಳು ಮತ್ತು ಕೆಲವು ಟಿವಿ ನ್ಯೂಸ್ ಚಾನೆಲ್ಗಳ ಲೋಗೊಗಳನ್ನು ಬಳಸಿಕೊಂಡು ವೀಕ್ಷಕರನ್ನು ತಪ್ಪು ದಾರಿಗೆಳೆಯಲು ಪ್ರಯತ್ನಿಸುತ್ತಿದ್ದವು ಎಂದು ಆರೋಪಿಸಲಾಗಿದೆ.
ಈ ನಿಷೇಧಿತ ಎಲ್ಲಾ ಯೂಟ್ಯೂಬ್ ಚಾನೆಲ್ಗಳು ತಮ್ಮ ವೀಡಿಯೊಗಳಲ್ಲಿ ಕೋಮು ಸೌಹಾರ್ದತೆ, ಸಾರ್ವಜನಿಕ ಸುವ್ಯವಸ್ಥೆ ಮತ್ತು ಭಾರತದ ವಿದೇಶಿ ಸಂಬಂಧಗಳಿಗೆ ಹಾನಿಯುಂಟುಮಾಡುವ ಸುಳ್ಳು ವಿಷಯವನ್ನು ಹೊಂದಿರುವ ಜಾಹೀರಾತುಗಳನ್ನು ಪ್ರದರ್ಶಿಸುತ್ತಿವೆ ಎಂದು ಸಚಿವಾಲಯ ಹೇಳಿದೆ.