ಬೆಂಗಳೂರು : ದೇಶಕ್ಕೆ ಮಾತನಾಡುವ ರಾಷ್ಟ್ರಪತಿ ಬೇಕು. ನಾನು ಗೆದ್ದರೆ ದೇಶದ್ರೋಹ ಕಾನೂನು ರದ್ದು ಮಾಡುತ್ತೇನೆ ಎಂದು ರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿ ಯಶವಂತ್ ಸಿನ್ಹಾ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶಕ್ಕೆ ಮೌನಿಯಾಗಿರುವ ಅಥವಾ ರಬ್ಬರ್ ಸ್ಟ್ಯಾಂಪ್ ರಾಷ್ಟ್ರಪತಿ ಅಗತ್ಯವಿಲ್ಲ. ಮಾತನಾಡುವ ರಾಷ್ಟ್ರಪತಿ ಬೇಕು ಎಂದು ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ.
ಎರಡು ದಿನಗಳ ಹಿಂದೆ ಸುಪ್ರೀಂ ಕೋರ್ಟ್ ಕೆಲ ಅಭಿಪ್ರಾಯ ವ್ಯಕ್ತಪಡಿಸಿದೆ. ನೂಪುರ್ ಶರ್ಮಾ ಬಗ್ಗೆ ಸುಪ್ರೀಂ ಕೋರ್ಟ್ ಕೆಲವು ಅಭಿಪ್ರಾಯ ಹೇಳಿದೆ. ನ್ಯಾಯಾಂಗವು ಸಂವಿಧಾನಕ್ಕೆ ಉತ್ತರದಾಯಿ ಆಗಿರಬೇಕು ಅಂತಾ ಕೋರ್ಟ್ ಹೇಳಿದೆ.
ನ್ಯಾಯಾಲಯದ ಅಭಿಪ್ರಾಯವನ್ನು ನಾನು ಸ್ವಾಗತಿಸುತ್ತೇನೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಸುಪ್ರೀಂ ಕೋರ್ಟ್ನ ಅಭಿಪ್ರಾಯ ಬಗ್ಗೆ ಟೀಕೆ-ಟಿಪ್ಪಣಿ ಮಾಡಲಾಗುತ್ತಿದೆ. ಕೆಟ್ಟದಾಗಿ ಟೀಕೆ ಮಾಡಲಾಗುತ್ತಿದೆ. ನ್ಯಾಯಾಂಗದ ಮೇಲಿನ ಇಂತಹ ಟೀಕೆ ಪ್ರಜಾಪ್ರಭುತ್ವಕ್ಕೆ ಕಳಂಕ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.