ಹರ್ಯಾಣ: ಕರ್ನಾಟಕ ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಹರ್ಯಾಣ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಹೇಳಿಕೆ ನೀಡಿದ್ದಾರೆ.
ಸೋನಿಪತ್ ನಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ನರೇಂದ್ರ ಮೋದಿ, ಕರ್ನಾಟಕ ಸಿಎಂ ಸಿದ್ದರಾಮಯ್ಯ ವಿರುದ್ಧ ಹೈಕೋರ್ಟ್ ತನಿಖೆಗೆ ಆದೇಶಿಸಿದೆ. ಹೀಗಾಗಿ ತನಿಖೆ ನಡೆಯಬೇಕು ಎಂದಿದ್ದಾರೆ. ಕಾಂಗ್ರೆಸ್ ಆಡಳಿತದ ಯಾವ ರಾಜ್ಯವೂ ಅಭಿವೃದ್ಧಿಯಾಗಿಲ್ಲ. ಹೈಕಮಾಂಡ್ ನವರೇ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿರುವಾಗ ಕೆಳಗೆ ಇರುವ ನಾಯಕರಿಗೂ ಲೂಟಿ ಮಾಡಲು ಲೈಸೆನ್ಸ್ ಸಿಕ್ಕಂತಾಗುತ್ತದೆ ಎಂದು ಟೀಕಿಸಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು 2 ವರ್ಷವಾಗಿದೆ. ಅಲ್ಲಿ ಯಾವ ಸ್ಥಿತಿ ನಿರ್ಮಾಣವಾಗಿದೆಯೆಂದರೆ ಮುಖ್ಯಮಂತ್ರಿ ವಿರುದ್ಧವೇ ಭೂಹಗರಣ ಆರೋಪ ಬಂದಿದೆ. ಸ್ವತಃ ಹೈಕೋರ್ಟ್ ತನಿಖೆಗೆ ಆದೇಶಿಸಿ ಛಾಟಿ ಬೀಸಿದೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.
ತಮ್ಮ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುತ್ತಿದ್ದಂತೇ ಸಿದ್ದರಾಮಯ್ಯ ಹೈಕೋರ್ಟ್ ಗೆ ಹೋದರು. ಆದರೆ ಹೈಕೋರ್ಟ್ ಸರಿಯಾಗಿಯೇ ಪೆಟ್ಟು ನೀಡಿದೆ. ಇಂತಹ ಭ್ರಷ್ಟಾಚಾರಿಗಳಿಗೆ ಹರ್ಯಾಣದಲ್ಲೂ ಅವಕಾಶ ಕೊಡ್ತೀರಾ ಎಂದು ಪ್ರಧಾನಿ ಪ್ರಶ್ನೆ ಮಾಡಿದ್ದಾರೆ.