ಬೆಂಗಳೂರು: ಒಂದೆಡೆ ತಮ್ಮ ಮೇಲೆ ಮುಡಾ ಹಗರಣದ ತೂಗುಗತ್ತಿಯಿದ್ದರೆ ಇನ್ನೊಂದೆಡೆ ವಿಪಕ್ಷಗಳಿಂದ ರಾಜೀನಾಮೆಗೆ ಒತ್ತಾಯ ಕೇಳಿಬರುತ್ತಿದೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಕೂಲ್ ಆಗಲು ನೆರೆ ರಾಜ್ಯಕ್ಕೆ ಪ್ರವಾಸ ಹೊರಟಿದ್ದಾರೆ.
ಮುಡಾ ಹಗರಣ ವಿಚಾರವಾಗಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಇಂದು ಸಿದ್ದರಾಮಯ್ಯ ವಿರುದ್ಧ ವಿಚಾರಣೆಗೆ ಆದೇಶ ನೀಡಿದೆ. ಇದರ ಬೆನ್ನಲ್ಲೇ ಸಿದ್ದರಾಮಯ್ಯ ಕೇರಳ ಪ್ರವಾಸ ಮಾಡಿದ್ದಾರೆ. ಇದಕ್ಕೆ ಮೊದಲು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ನಾನಿನ್ನೂ ಆದೇಶ ಪ್ರತಿ ನೋಡಿಲ್ಲ. ನೋಡಿದ ಮೇಲೆ ಪ್ರತಿಕ್ರಿಯಿಸುತ್ತೇನೆ ಎಂದಿದ್ದಾರೆ.
ನಿಮ್ಮ ಕುತೂಹಲ ನನಗೆ ಅರ್ಥವಾಗುತ್ತದೆ. ಆದರೆ ನನಗೆ ಆದೇಶ ಪ್ರತಿ ಇನ್ನೂ ಬಂದಿಲ್ಲ. ಇಂದು ಸಂಜೆ ಸಿಗಬಹುದು ಎಂದುಕೊಂಡಿದ್ದೇನೆ. ನಾನು ಈವತ್ತು ಕೇರಳಕ್ಕೆ ಹೋಗ್ತಾ ಇದ್ದೇನೆ. ಆದೇಶ ಪ್ರತಿ ಓದಿದ ಮೇಲೆ ನಿಮಗೆ ಪ್ರತಿಕ್ರಿಯೆ ನೀಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಎಲ್ಲಾ ಆರೋಪಗಳ ವಿರುದ್ಧವೂ ಕಾನೂನು ರೀತಿಯಲ್ಲೇ ಹೋರಾಟ ಮಾಡುತ್ತೇನೆ. ಬಿಜೆಪಿ-ಜೆಡಿಎಸ್ ಪಿತೂರಿಗಳು, ಆರೋಪಕ್ಕೆಲ್ಲಾ ನಾನು ಹೆದರೋನಲ್ಲ. ನಾನೇನೂ ತಪ್ಪು ಮಾಡಿಲ್ಲ. ಹೀಗಾಗಿ ಯಾವ ತನಿಖೆಯನ್ನೂ ಎದುರಿಸಲು ಸಿದ್ಧ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.