ಬೆಂಗಳೂರು: ಮುಡಾ ಹಗರಣದಲ್ಲಿ ತಮ್ಮ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಸರಿ ಎಂದು ತೀರ್ಪು ಬರುತ್ತಿದ್ದಂತೇ ಸಿಎಂ ಸಿದ್ದರಾಮಯ್ಯ ಕುರ್ಚಿಗೆ ಕಂಟಕ ಬಂದಿದೆ. ಅವರ ರಾಜೀನಾಮೆಗೆ ಈಗ ಸ್ವಪಕ್ಷೀಯರಿಂದಲೇ ಒತ್ತಡ ಕೇಳಿಬಂದರೂ ಅಚ್ಚರಿಯಿಲ್ಲ.
ಒಂದು ವೇಳೆ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಾಗಿ ವಿಚಾರಣೆ ಆರಂಭವಾದರೆ ಅವರು ರಾಜೀನಾಮೆ ನೀಡುವ ಪರಿಸ್ಥಿತಿ ಬಂದರೂ ಅಚ್ಚರಿಯಿಲ್ಲ. ಆ ಅಳುಕು ಸಿದ್ದರಾಮಯ್ಯನವರಿಗಿದೆ. ಈ ಕಾರಣಕ್ಕೇ ಅವರು ಇಂದು ಶಾಸಕಾಂಗ ಪಕ್ಷದ ಸಭೆ ಕರೆದು ಬೆಂಬಲ ನೀಡಲು ಮನವಿ ಮಾಡಲಿದ್ದಾರೆ.
ಈಗಾಗಲೇ ಕಾಂಗ್ರೆಸ್ ನಲ್ಲಿ ಸಿಎಂ ಹುದ್ದೆ ಮೇಲೆ ಹಲವರ ಕಣ್ಣಿದೆ. ಹೀಗಾಗಿ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯ ಕೇಳಿಬಂದರೂ ಅಚ್ಚರಿಯಿಲ್ಲ. ಒಂದು ವೇಳೆ ತಾವು ರಾಜೀನಾಮೆ ಕೊಡಬೇಕಾಗಿ ಬಂದರೆ ಸಿದ್ದರಾಮಯ್ಯ ತಮ್ಮ ಆಪ್ತ ಬಳಗದಲ್ಲಿರುವ ಎಂಬಿ ಪಾಟೀಲ್ ಗೆ ಸಿಎಂ ಸ್ಥಾನ ಕೊಡುವಂತೆ ಪಟ್ಟು ಹಿಡಿಯಬಹುದು.
ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾದರೆ ಮತ್ತೆ ಸಿದ್ದರಾಮಯ್ಯಗೆ ಆ ಪದವಿಗೇರುವುದು ಕಷ್ಟವಾಗಬಹುದು. ಹೀಗಾಗಿ ಅವರು ಎಂಬಿ ಪಾಟೀಲ್ ರನ್ನೇ ಮುಖ್ಯಮಂತ್ರಿ ಮಾಡಲು ತಮ್ಮಿಂದಾದ ಎಲ್ಲಾ ಪ್ರಯತ್ನ ಮಾಡಬಹುದು. ಇನ್ನೊಂದೆಡೆ ಕಾಂಗ್ರೆಸ್ ಹೈಕಮಾಂಡ್ ಬಳಿ ಸತೀಶ್ ಜಾರಕಿಹೊಳಿ ಹೆಸರೂ ಇದೆ ಎನ್ನಲಾಗುತ್ತಿದೆ. ಇವರಿಬ್ಬರಲ್ಲಿ ಒಬ್ಬರಿಗೆ ಪಟ್ಟ ಸಿಗಬಹುದು ಎಂಬ ಗುಸು ಗುಸು ಕಾಂಗ್ರೆಸ್ ಪಾಳಯದಲ್ಲಿ ಕೇಳಿಬರುತ್ತಿದೆ.