ಗುವಾಹಟಿ: ಅಸ್ಸಾಂನ ಉತ್ತರ ಹಾಗೂ ಮಧ್ಯ ಭಾಗದಲ್ಲಿ ಇಂದು ಬೆಳಿಗ್ಗೆ 7.45ರ ಸುಮಾರಿಗೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.2 ತೀವ್ರತೆ ದಾಖಲಾಗಿದೆ.
ಗುವಾಹಟಿಯಿಂದ ಉತ್ತರಕ್ಕೆ ಸುಮಾರು 105 ಕಿ.ಮೀ ದೂರದಲ್ಲಿ ಅಸ್ಸಾಂ-ಅರುಣಾಚಲ ಪ್ರದೇಶ ಗಡಿಯ ಸಮೀಪದಲ್ಲಿ ಭೂಕಂಪದ ಕೇಂದ್ರ ಬಿಂದು ದಾಖಲಾಗಿದೆ. ಇದು ಭೂಮಿಯ 15 ಕಿ.ಮೀ. ಆಳದಲ್ಲಿ ಕೇಂದ್ರಿಕೃತವಾಗಿತ್ತು. ಈವರೆಗೆ ಯಾವುದೇ ಸಾವು ನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.
ದರಾಂಗ್, ತಮುಲ್‌ಪುರ, ಸೋನಿತ್‌ಪುರ, ಮತ್ತು ಬಿಸ್ವನಾಥ ಜಿಲ್ಲೆಗಳಲ್ಲೂ ಕಂಪನದ ಅನುಭವವಾಗಿದೆ. ಬ್ರಹ್ಮಪುತ್ರ ನದಿ ತೀರದಲ್ಲಿರುವ ಕಾಮರೂಪ, ಮೊರಿಗಾಂವ್ ಮತ್ತು ನಾಗಾಂವ್ ಜಿಲ್ಲೆಗಳಲ್ಲೂ ಕಂಪನದ ಅನುಭವವಾಗಿದೆ ಎಂದು ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ ತಿಳಿಸಿದೆ.
ಅರುಣಾಚಲದ ಪಶ್ಚಿಮ ಭಾಗ ಮತ್ತು ಭೂತಾನ್ ದೇಶದ ಪೂರ್ವ ಭಾಗದ ಕೆಲವು ಪ್ರದೇಶಗಳಲ್ಲಿ ಸಹ ಭೂಕಂಪವಾಗಿದೆ. ಭಾರತದ ಈಶಾನ್ಯ ಪ್ರದೇಶವು ಅಧಿಕ ಭೂಕಂಪ ವಲಯದಲ್ಲಿರುವುದರಿಂದ ಇಲ್ಲಿ ಪದೇ ಪದೇ ಭೂಕಂಪ ಸಂಭವಿಸುತ್ತದೆ.