ಮುಂಬೈ: ಬಾಲಿವುಡ್ ಸೆಲೆಬ್ರೆಟಿಗಳ ಆಪ್ತ ಹಾಗೂ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರನ್ನು ಗುಂಡು ಹಾರಿಸಿ ಭೀಕರವಾಗಿ ಹತ್ಯೆ ಮಾಡಲಾಗಿದೆ.
ಎನ್‌ಸಿಪಿಯ ಅಜಿತ್ ಪವಾರ್ ಬಣದಲ್ಲಿರುವ ಸಿದ್ದಿಕಿ ಮೇಲೆ ಮುಂಬೈನ ಬಾಂದ್ರಾದಲ್ಲಿ ಗುಂಡಿನ ದಾಳಿ ನಡೆದಿದೆ. ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಅವರು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ.
ಶನಿವಾರ ರಾತ್ರಿ 9.30 ಗಂಟೆ ಸುಮಾರಿಗೆ ಬಾಬಾ ಸಿದ್ಧಿಕಿ ಅವರ ಮೇಲೆ ಮೂರು ಬುಲೆಟ್‌ಗಳನ್ನು ಹಾರಿಸಲಾಗಿತ್ತು. ಅವರ ಮಗ ಜೀಶನ್ ಸಿದ್ದಿಕಿ ಅವರ ಕಚೇರಿಯಲ್ಲಿ ಈ ದಾಳಿ ನಡೆದಿತ್ತು. ಜೀಶನ್ ಬಾಂದ್ರಾ ಪೂರ್ವದ ಶಾಸಕರಾಗಿದ್ದಾರೆ. ಘಟನೆ ಸಂಬಂಧ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಬಾಂದ್ರಾ ಪಶ್ಚಿಮದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಬಾಬಾ ಸಿದ್ಧಿಕಿ ಸುಮಾರು 48 ವರ್ಷಗಳ ಕಾಲ ಕಾಂಗ್ರೆಸ್‌ನಲ್ಲಿದ್ದರು. ಕಳೆದ ಫೆಬ್ರವರಿಯಲ್ಲಿ ಅವರು ಕೈ ಪಾಳಯ ತೊರೆದು ಅಜಿತ್ ಪವಾರ್ ಅವರ ಎನ್‌ಸಿಪಿ ಬಣ ಸೇರಿದ್ದರು. ಈ ಹಿನ್ನೆಲೆಯಲ್ಲಿ ಅವರ ಪುತ್ರ ಜೀಶನ್ ಸಿದ್ದಿಕಿ ಅವರನ್ನು ಕಾಂಗ್ರೆಸ್ ಆಗಸ್ಟ್‌ನಲ್ಲಿ ಪಕ್ಷದಿಂದ ಉಚ್ಚಾಟನೆ ಮಾಡಿತ್ತು.
ದಸರಾದಂದೇ ಈ ಗುಂಡಿನ ದಾಳಿ ನಡೆದಿದ್ದು, ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೂ ಮುನ್ನ ನಡೆದಿರುವ ಈ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಬಾಬಾ ಸಿದ್ಧಿಕಿ ಅವರು 1999, 2004 ಹಾಗೂ 2009ರ ಚುನಾವಣೆಯಲ್ಲಿ ಬಾಂದ್ರಾ ಪಶ್ಚಿಮ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಅವರು 2004ರಿಂದ 2008ರವರೆಗೆ ಆಹಾರ ಮತ್ತು ನಾಗರಿಕ ಸರಬರಾಜು, ಕಾರ್ಮಿಕ ಹಾಗೂ ಎಫ್‌ಡಿಎ ಸಚಿವರೂ ಆಗಿದ್ದರು.