Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಲಕ್ನೋ : ಮದುವೆ ಮನೆಯ ಸಂಭ್ರಮದಲ್ಲಿ ಇದ್ದ ಮನೆ ಮಂದಿಗೆ ವಧು ಶಾಕ್ ನೀಡಿದ ಘಟನೆಯೊಂದು ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಚಹಾದಲ್ಲಿ ಪ್ರಜ್ಞೆತಪ್ಪಿಸುವ ಮದ್ದು ಬೆರೆಸಿದ ವಧು, ಮನೆಯಲ್ಲಿರುವ ಚಿನ್ನಾಭರಣದೊಂದಿಗೆ ತನ್ನ ಪ್ರಿಯಕರನ ಜೊತೆ ಎಸ್ಕೇಪ್ ಆಗಿದ್ದಾಳೆ.
ಡಿಸೆಂಬರ್ 18 ರಂದು ಮದುವೆ ನಿಗದಿಯಾಗಿತ್ತು. ಡಿಸೆಂಬರ್ 17 ರಂದು, ಮದುವೆಯ ಸಿದ್ಧತೆಯಲ್ಲಿ ನಿರತರಾಗಿದ್ದ ಕುಟುಂಬ ಸದಸ್ಯರೆಲ್ಲರಿಗೂ ಕುಡಿಯಲು ಚಹಾವನ್ನು ನೀಡಿದ್ದಾಳೆ. ಕುಟುಂಬಸ್ಥರೆಲ್ಲರೂ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದ ನಂತರ ಯುವತಿ ಮನೆಯಲ್ಲಿದ್ದ ನಗದು ಮತ್ತು ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾಳೆ.
ಮದುವೆಗೆ ಒಂದು ದಿನ ಬಾಕಿ ಇರುವಾಗ ಅವಳು ತನ್ನ ಪ್ರೇಮಿಯೊಂದಿಗೆ ಓಡಿಹೋಗಿದ್ದಾಳೆ. ಕುಟುಂಬಸ್ಥರು ಎಚ್ಚರಗೊಂಡು ನೋಡಿದ್ದಾಗ ವಧು ಕಾಣದೆ ಇರುವುದರಿಂದ ಆತಂಕಗೊಂಡು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕುಟುಂಬದ ಕೆಲವರೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸುಮಾರು 1.5 ಲಕ್ಷ ರೂಪಾಯಿ ಹಾಗೂ ಬೆಲೆಬಾಳುವ ಚಿನ್ನಾಭರಣಗಳೊಂದಿಗೆ ಯುವತಿ ಪರಾರಿಯಾಗಿದ್ದಾಳೆ ಎಂದು ವಧುವಿನ ಕುಟುಂಬಸ್ಥರು ಯುವತಿಯ ವಿರುದ್ಧ ವರ ವಂಚನೆ ಪ್ರಕರಣ ದಾಖಲಿಸಿದ್ದಾರೆ.