ಸರ್ಕಾರದ ಸೌಲಭ್ಯಗಳನ್ನ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ ಮಾಡುವ ನಿಯಮಾವಳಿ ಅವಧಿಯನ್ನ ಡಿಸೆಂಬರ್ 31ರವರೆಗೆ ವಿಸ್ತರಿಸಿರುವುದಾಗಿ ಬುಧವಾರ ಕೇಂದ್ರ ಸರ್ಕಾರ, ಸುಪ್ರೀಂಕೋರ್ಟ್`ಗೆ ತಿಳಿಸಿದೆ.
ಕೇಂದ್ರ ಸರ್ಕಾರದ ಪರವಾಗಿ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್, ಸುಪ್ರೀಂಕೋರ್ಟ್ ಮುಂದೆ ಹೇಳಿಕೆ ನೀಡಿದ್ಧಾರೆ. ಖಾಸಗೀತನದ ಹಕ್ಕು ಮೂಲಭೂತ ಹಕ್ಕೆಂದು ಸಂವಿಧಾನ ಪೀಠ ತೀರ್ಪು ನೀಡಿದ ಬಳಿಕ ಸರ್ಕಾರಿ ಸೌಲಭ್ಯಕ್ಕೆ ಆಧಾರ್ ಕಡ್ಡಾಯ ಕುರಿತ ಕೇಂದ್ರ ನಿರ್ಧಾರ ಪ್ರಶ್ನಿಸಿದ್ದ ಅರ್ಜಿದಾರರು ಶೀಘ್ರ ವಿಚಾರಣೆಗೆ ಒತ್ತಾಯಿಸಿದ್ದಾರೆ.
ಹೀಗಾಗಿ, ಸುಪ್ರೀಂಕೋರ್ಟ್ ಆಧಾರ್ ಕಡ್ಡಾಯ ಪ್ರಶ್ನಿಸಿರುವ ಎಲ್ಲ ಅರ್ಜಿಗಳ ವಿಚಾರಣೆಯನ್ನ ನವೆಂಬರ್ 1ರಂದು ನಡೆಸಲು ತೀರ್ಮಾನಿಸಿದೆ. ಈ ಮಧ್ಯೆ, ತ್ರಿಸದಸ್ಯರ ಪೀಠದ ಬದಲು ಪಂಚಪೀಠದ ಮುಂದೆ ಅರ್ಜಿ ಪಟ್ಟಿ ಮಾಡಲು ಅಟಾರ್ನಿ ಜನರಲ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿಗೆ ಮನವಿ ಮಾಡಿದ್ದಾರೆ.
ಈ ಹಿಂದೆ ಜೂನ್ 27ಕ್ಕೆ ಸರ್ಕಾರಿ ಯೋಜನೆಗಳಿಗೆ ಆಧಾರ್ ಕಡ್ಡಾಯ ನಿಯಮಾವಳಿ ಜಾರಿಗೆ ಡೆಡ್ ಲೈನ್ ವಿಧಿಸಲಾಗಿತ್ತು. ಬಳಿಕ, ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿತ್ತು. ಇದೀಗ, ಮತ್ತೆ ಡಿಸೆಂಬರ್ 31ಕ್ಕೆ ವಿಸ್ತರಣೆ ಮಾಡಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ