ಮಾದರಿ ಶಾಲೆ ರೂಪಿಸಬೇಕು ಎನ್ನುವುದು ಸರಕಾರದ ಗುರಿ. ಅದಕ್ಕಾಗಿ ಈಗಿರುವ ಶಾಲೆಗಳ ಸಂಖ್ಯೆಗಳನ್ನು ಕಡಿಮೆ ಮಾಡಲು ಚಿಂತನೆ ನಡೆಸಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ಸಂವಾದದಲ್ಲಿ ಮಾತನಾಡಿದ ಅವರು, ಮಾದರಿ ಶಾಲೆ ರೂಪಿಸಬೇಕು ಎನ್ನುವುದು ಸರಕಾರದ ಗುರಿ.
ತರಗತಿಗೊಬ್ಬ ಶಿಕ್ಷಕ ಮತ್ತು ಪ್ರತೀ ವಿಭಾಗಕ್ಕೆ ಶಿಕ್ಷಕರು ಇರಬೇಕು. ತರಗತಿ ಕೊಠಡಿಗಳು ಅಚ್ಚುಕಟ್ಟಾಗಿ ಇರಬೇಕು. ಪ್ರತೀ ಮಗುವಿನ ಬಗ್ಗೆ ಗಮನಹರಿಸಬೇಕು. ಇದು ಇನ್ನೂ "ಟೇಕ್ ಆಫ್' ಹಂತದಲ್ಲಿದೆ. ಇಲಾಖೆ ಹೋಬಳಿ ಮಟ್ಟದಲ್ಲಿ ಇದನ್ನು ಪರಿಚಯಿಸಲಿದೆ. ಆದರೆ ಈಗಿರುವ ಶಿಕ್ಷಕರ ಸಂಖ್ಯೆಯಲ್ಲಿ ಇದು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಏಕ ಹಳ್ಳಿ ಗ್ರಾಮ ಪಂಚಾಯತ್‌ಗಳಲ್ಲಿ ಇರುವ ಹಲವು ಶಾಲೆಗಳ ಸಂಖ್ಯೆಯನ್ನು 2 ಅಥವಾ 3ಕ್ಕೆ ಇಳಿಸಲಾಗುವುದು ಎಂದಿದ್ದಾರೆ.
ನಮ್ಮಲ್ಲಿ 23 ವಿದ್ಯಾರ್ಥಿಗಳಿಗೊಬ್ಬರಂತೆ ಶಿಕ್ಷಕರಿದ್ದಾರೆ. ಹತ್ತು ಮಕ್ಕಳಿರುವ ಶಾಲೆಗೆ ಒಬ್ಬ ಶಿಕ್ಷಕರನ್ನು ನೀಡುತ್ತೇವೆ. ಒಂದು ವೇಳೆ 11 ಮಕ್ಕಳಿದ್ದರೆ ಅಂತಹ ಶಾಲೆಗೆ ಇಬ್ಬರು ಶಿಕ್ಷಕರನ್ನು ನೀಡಲಾಗುತ್ತದೆ. ಪ್ರತೀ ಐದು ಮಕ್ಕಳಿಗೆ ಒಬ್ಬರಂತೆ ಶಿಕ್ಷಕರು ಇರಬೇಕು ಎಂಬುದು ಗುರಿ ಎಂದರು.