ವಿವಾಹವೆನ್ನುವುದು ಪತಿಗೆ ಪತ್ನಿಯ ಮೇಲೆ ಬಲವಂತದ ಅತ್ಯಾಚಾರ ಎಸಗಲು ಲೈಸೆನ್ಸ್ ಅಲ್ಲ, ಹೆಂಡತಿ ಮೇಲೆ ರೇಪ್ ಮಾಡುವ ಗಂಡನಿಗೆ ಯಾವುದೇ ವಿನಾಯ್ತಿ ಇರಬಾರದೆಂದು ಕರ್ನಾಟಕ ಹೈಕೋರ್ಟ್ ಮಾ.23ರಂದು ನೀಡಿದ್ದ ಮಹತ್ವದ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ.
ಪತ್ನಿ ತನ್ನ ವಿರುದ್ಧ ದಾಖಲಿಸಿರುವ ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಬೆಂಗಳೂರಿನ ಹೃಷಿಕೇಶ್ ಎಂಬುವರು ಸಲ್ಲಿಸಿರುವ ಅರ್ಜಿಯನ್ನು ಆಲಿಸಿದ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ, ಅತ್ಯಾಚಾರ ಆರೋಪದಲ್ಲಿ ಪತಿಯೇ ಇದ್ದರೂ ಅವರಿಗೆ ವಿನಾಯ್ತಿ ನೀಡಬಾರದು, ಆ ಬಗ್ಗೆ ಶಾಸಕಾಂಗ ಚಿಂತನೆ ನಡೆಸಬೇಕಾಗುತ್ತದೆ ಎಂದು ಆದೇಶಿಸಿತ್ತು.
ಗಂಡನ ವಿರುದ್ಧವೇ ಹೆಂಡತಿ ಅತ್ಯಾಚಾರ ಕೇಸ್ ದಾಖಲಿಸಿದ್ದಾರೆ. ಹಾಗಾಗಿ ಪತಿಗೆ ವಿನಾಯಿತಿ ಇದ್ದರೂ ಆತನ ವಿರುದ್ಧದ ಅತ್ಯಾಚಾರ ಆರೋಪ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಪತಿಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್ ಏಕಸದಸ್ಯ ಪೀಠವು ಪತಿಯ ವಿರುದ್ಧವೂ ಅತ್ಯಾಚಾರ ಕೇಸ್ ಪರಿಗಣಿಸಬೇಕು. ಪತಿಯ ಕೃತ್ಯದಿಂದ ಪತ್ನಿಯ ಮೇಲೆ ಮಾನಸಿಕವಾಗಿ, ದೈಹಿಕವಾಗಿ ಪರಿಣಾಮ ಬೀರುತ್ತದೆ. ಪತ್ನಿಯ ಮನಸಿನ ಮೇಲೆ ಅಳಿಸಲಾಗದ ಕಲೆ ಉಳಿದುಬಿಡುತ್ತದೆ. ಅತ್ಯಾಚಾರದ ವಿಚಾರದಲ್ಲಿ ಮಹಿಳೆ, ಪತ್ನಿಯ ನಡುವೆ ತಾರತಮ್ಯ ಸರಿಯಲ್ಲ.ವಿವಾಹ ಪತ್ನಿಯ ಮೇಲೆ ದೌರ್ಜನ್ಯವೆಸಗಲು ನೀಡುವ ಅನುಮತಿಯಲ್ಲ ಎಂದು ಹೇಳಿದೆ.
"ಸಂವಿಧಾನದ ಅಡಿಯಲ್ಲಿ ಎಲ್ಲ ಮಾನವ ಜೀವಿಗಳೂ ಸಮಾನರೇ, ಅವರು ಗಂಡಾಗಿದ್ದರೂ ಸರಿ, ಹೆಣ್ಣಾಗಿದ್ದರೂ ಸರಿಯೇ ಅಥವಾ ಇನ್ಯಾರೇ ಆಗಿದ್ದರೂ ಸೈ, ಸಂವಿಧಾನದ 14ನೇ ವಿಧಿಯ ಅನುಸಾರ ಸಮಾನತೆ ಸಮಾನತೆಯೇ. ಇದರಲ್ಲಿ ಯಾವುದೇ ರಾಜೀ ಇಲ್ಲ'' ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.