ಬೆಂಗಳೂರು: ಹೆದ್ದಾರಿಗಳಲ್ಲಿ ಅತಿಯಾದ ವೇಗದಿಂದ ಗಾಡಿ ಓಡಿಸುವವರು ಇನ್ನು ಮುಂದೆ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ. ಅಂತಹವರ ವಿರುದ್ಧ ಎಫ್ ಐಆರ್ ದಾಖಲಿಸಲು ಸಂಚಾರ ಪೊಲೀಸರು ನಿರ್ಧರಿಸಿದ್ದಾರೆ.
ಹೆದ್ದಾರಿಗಳಲ್ಲಿ ಅತೀ ವೇಗ ಮತ್ತು ರಾಶ್ ಡ್ರೈವಿಂಗ್ ಮಾಡಿ ಅಪಘಾತಗಳಿಗೆ ಕಾರಣವಾಗುವ ಅನೇಕ ಘಟನೆಗಳನ್ನು ನೋಡಿದ್ದೇವೆ. ಇನ್ನು ಮುಂದೆ ಆ ರೀತಿ ಡ್ರೈವಿಂಗ್ ಮಾಡುವವರ ವಿರುದ್ಧ ಬರೀ ದಂಡ ಮಾತ್ರವಲ್ಲ, ಎಫ್ಐಆರ್ ದಾಖಲಾಗಲಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಇಂತಹ ಅನೇಕ ಪ್ರಕರಣಗಳು ವರದಿಯಾದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.
ಓವರ್ ಸ್ಪೀಡ್ ಗೆ ಬ್ರೇಕ್ ಹಾಕಲು ಎಡಿಜಿಪಿ ಅಲೋಕ್ ಕುಮಾರ್ ಇಂತಹದ್ದೊಂದು ನಿಯಮ ಜಾರಿಗೆ ತಂದಿದ್ದಾರೆ. ಹೆದ್ದಾರಿಗಳಲ್ಲಿ 130 ಕಿ.ಮೀ. ಗೂ ಅಧಿಕ ವೇಗದಲ್ಲಿ ವಾಹನ ಚಲಾಯಿಸಿದರೆ ಸಿಸಿಟಿವಿಯಲ್ಲಿ ದಾಖಲಾಗಲಿದೆ. ಅಂತಹ ವಾಹನ ಮಾಲಿಕರಿಗೆ ದಂಡದ ಜೊತೆಗೆ ಎಫ್ ಐಆರ್ ದಾಖಲಾಗಲಿದೆ.
ಈಗಾಗಲೇ ಒನ್ ವೇನಲ್ಲಿ ವಾಹನ ನುಗ್ಗಿಸುವುದು, ಕಣ್ಣಿಗೆ ರಾಚುವಂತಹ ಹೆಡ್ ಲೈಟ್ ಹಾಕುವುದು ಇತ್ಯಾದಿ ಕೆಲಸಗಳನ್ನು ಮಾಡುವ ವಾಹನ ಚಾಲಕರನ್ನು ಗುರುತಿಸಿ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಅದರ ಜೊತೆಗೆ ಈಗ ವೇಗದ ಚಾಲನೆಗೂ ಬ್ರೇಕ್ ಹಾಕಲು ಕ್ರಮ ಕೈಗೊಳ್ಳಲಾಗಿದೆ.