ಬೆಂಗಳೂರು: ಬೆಂಗಳೂರಿನಲ್ಲಿ ನಾಯಿ ಮಾಂಸ ಸಾಗಾಟ ಆರೋಪ ಕೇಳಿಬಂದಿದ್ದು, ಸರ್ಕಾರೀ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಬಂಧಿತರಾಗಿದ್ದ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಠಾಣೆಯಲ್ಲೇ ಅಸ್ವಸ್ಥರಾದ ಘಟನೆ ನಡೆದಿದೆ.
ರಾಜಸ್ತಾನದಿಂದ ಬೆಂಗಳೂರಿಗೆ ರೈಲಿನಲ್ಲಿ ಸಾಗಾಟವಾಗುತ್ತಿರುವ 4,500 ಕೆ.ಜಿ ಮಟನ್ ಮಾಂಸವನ್ನು ನಾಯಿ ಮಾಂಸ ಎಂದು ಹಿಂದೂ ಸಂಘಟನೆಗಳ ಕಾರ್ಯಕರ್ತರು ಆರೋಪ ಮಾಡಿದ್ದಾರೆ. ನಿನ್ನೆ ರಾಜಸ್ಥಾನದಿಂದ ಮಟನ್ ಮಾಂಸ ಎಂದು ಬಂದ 90 ಮಾಂಸದ ಬಾಕ್ಸ್ ಗಳು ನಾಯಿ ಮಾಂಸ ಎಂಬ ಆರೋಪ ಕೇಳಿಬಂದಿದೆ.
ಈ ಸಂಬಂಧ ಮೆಜೆಸ್ಟಿಕ್ ರೈಲ್ವೇ ನಿಲ್ದಾಣದ ಬಳಿ ಭಾರೀ ಪ್ರತಿಭಟನೆ ನಡೆಯಿತು. ಮಾಂಸ ತರಿಸಿಕೊಂಡಿದ್ದ ವ್ಯಾಪಾರೀ ಕೂಡಾ ಸ್ಥಳಕ್ಕೆ ಆಗಮಿಸಿದ್ದು, ಅಲ್ಲಿದ್ದವರಿಗೆ ಬಾಕ್ಸ್ ಗಳನ್ನು ತೆರೆಯಲು ಬಿಡಲಿಲ್ಲ. ಕೊನೆಗೆ ಆಹಾರ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದರು. ಬಳಿಕ ಪರೀಕ್ಷೆಗಾಗಿ ಸ್ಯಾಂಪಲ್ ತೆಗೆದುಕೊಂಡು ಹೋಗಿದ್ದಾರೆ. ಮಟನ್ ಎಂಬ ಹೆಸರಿನಲ್ಲಿ ನಾಯಿ ಮಾಂಸವನ್ನು ತರಿಸಿಕೊಳ್ಳುವುದೂ ವಂಚನೆಯ ಜಾಲವಾಗಿದೆ. ನಾಯಿ ಮಾಂಸ ಕಡಿಮೆ ಬೆಲೆಗೆ ಸಿಗುತ್ತದೆ ಎಂಬ ಕಾರಣಕ್ಕೆ ಈ ದಂಧೆ ನಡೆಯುತ್ತಿದೆ.
ಈ ವೇಳೆ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿತ್ತು. ಈ ವೇಳೆ ಪೊಲೀಸರು ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಪುನೀತ್ ಕೆರೆಹಳ್ಳಿಯನ್ನು ಬಂಧಿಸಿದ್ದರು. ಆದರೆ ಠಾಣೆಯಲ್ಲಿ ಹೊಟ್ಟೆನೋವಿನಿಂದಾಗಿ ಏಕಾಏಕಿ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.