ಬೆಂಗಳೂರು: ರಾಜ್ಯದಲ್ಲಿ ಕೆಎಸ್ ಆರ್ ಟಿಸಿ ಬಸ್ ಪ್ರಯಾಣ ದರ ಏರಿಕೆ ಕುರಿತಂತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಹತ್ವದ ಹೇಳಿಕೆ ನೀಡಿದ್ದಾರೆ. ಕೆಎಸ್ ಆರ್ ಟಿಸಿಯಿಂದ ಟಿಕೆಟ್ ದರ ಹೆಚ್ಚಳಕ್ಕೆ ಪ್ರಸ್ತಾವನೆ ಬಂದಿದೆ ಎಂದಿದ್ದಾರೆ.
ಲೋಕಸಭೆ ಚುನಾವಣೆ ಮುಗಿದ ಬಳಿಕ ಬಸ್ ಟಿಕೆಟ್ ದರ ಏರಿಕೆ ಬಗ್ಗೆ ಮಾತುಗಳು ಕೇಳಿಬರುತ್ತಲೇ ಇತ್ತು. ಡೀಸೆಲ್ ದರ ಏರಿಕೆಯಾದ ಬೆನ್ನಲ್ಲೇ ಕೆಎಸ್ ಆರ್ ಟಿಸಿ ನಿಗಮ ಬಸ್ ಪ್ರಯಾಣ ದರ ಏರಿಕೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡಿತ್ತು. ಇದೀಗ ಕೆಎಸ್ ಆರ್ ಟಿಸಿ ಸಾರಿಗೆ ಸಚಿವರಿಗೆ ಟಿಕೆಟ್ ದರ ಹೆಚ್ಚಳಕ್ಕೆ ಪ್ರಸ್ತಾವನೆ ಮುಂದಿಟ್ಟಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಕೆಎಸ್ ಆರ್ ಟಿಸಿ ಕಡೆಯಿಂದ ದರ ಹೆಚ್ಚಳಕ್ಕೆ ಪ್ರಸ್ತಾವನೆ ಬಂದಿರುವುದು ನಿಜ. ಆದರೆ ಅದನ್ನು ನಾನಿನ್ನೂ ಸರಿಯಾಗಿ ನೋಡಿಲ್ಲ. ಗಮನಿಸಿದ ಮೇಲೆ ಪ್ರಸ್ತಾವನೆ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.
ಹೀಗಾಗಿ ಕೆಎಸ್ ಆರ್ ಟಿಸಿ ಬಸ್ ಟಿಕೆಟ್ ದರ ಹೆಚ್ಚಳವಾದರೂ ಅಚ್ಚರಿಯಿಲ್ಲ. ಕೆಲವು ದಿನಗಳ ಹಿಂದಷ್ಟೇ ಡೀಸೆಲ್ ದರ ಏರಿಕೆಯಾಗಿತ್ತು. ಅದರ ಜೊತೆಗೆ ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಗ್ಯಾರಂಟಿ ನೀಡಿದೆ. ಈ ಯೋಜನೆಗಳಿಂದಾಗುತ್ತಿರುವ ನಷ್ಟ ಸರಿದೂಗಿಸಲು ಬಸ್ ಟಿಕೆಟ್ ದರ ಏರಿಕೆ ಅನಿವಾರ್ಯ ಎನ್ನಲಾಗುತ್ತಿದೆ.