ಭಾರತ್ ಬಂದ್ ವೇಳೆಯನ್ನೇ ಅವಕಾಶವನ್ನಾಗಿ ಬಳಸಿಕೊಂಡ ಕಳ್ಳರು ಹಾಡುಹಗಲೇ ತಮ್ಮ ಕೈಚಳಕ ತೋರಿದ್ದಾರೆ.
ಹಾಡು ಹಗಲೇ ಸುಮಾರು 16 ಅಂಗಡಿಗಳ ಬೀಗ ಮುರಿದು ಅಪಾರ ಹಣವನ್ನು ಕಳ್ಳರು ಕೊಳ್ಳೆ ಹೊಡೆದ ಘಟನೆ ನಡೆದಿದೆ.
ಹುಬ್ಬಳ್ಳಿಯ ಎ.ಪಿ.ಎಂ.ಸಿಯಲ್ಲಿ ನಡೆದ ಘಟನೆ ಇದಾಗಿದೆ. ನಗರದ ಅಮರಗೋಳದಲ್ಲಿರುವ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿನ ಅಂಗಡಿಗಳ ಬೀಗಗಳನ್ನು ಮುರಿದ ಕಳ್ಳರು ಸುಮಾರು 7 ಲಕ್ಷ ರೂ. ಹಣವನ್ನು ಕದ್ದು ಪರಾರಿಯಾಗಿದ್ದಾರೆ.
ವಿವಿಧ ಕಾರ್ಮಿಕ ಸಂಘಟನೆಗಳು ದೇಶಾದ್ಯಂತ ಬಂದ್ ಘೋಷಿಸಿದ್ದರ ಹಿನ್ನೆಲೆಯಲ್ಲಿ ಇಲ್ಲಿನ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿನ ವಿವಿಧ ವರ್ತಕರ ಸಂಘ, ಹಮಾಲರ ಸಂಘ ಹಾಗೂ ಇನ್ನಿತರ ಸಂಘಟನೆಗಳು ಈ ಬಂದ್ಗೆ ಬೆಂಬಲ ನೀಡಿದ್ದವು. ಇದೇ ಸಂದರ್ಭದಲ್ಲಿ ಎ.ಪಿ.ಎಂ.ಸಿ ಮಾರುಕಟ್ಟೆಯು ಬಿಕೋ ಎನ್ನುತ್ತಿದ್ದು, ಎಲ್ಲಾ ಅಂಗಡಿಗಳನ್ನು ಮುಚ್ಚಲಾಗಿತ್ತು. ಇದರ ಲಾಭ ಪಡೆದ ಕಳ್ಳರು ನಿರ್ಜನ ಪ್ರದೇಶದಲ್ಲಿ ಅಂಗಡಿಗಳ ಬೀಗ ಹಾಗೂ ಲಾಕರ್ಗಳ ಬೀಗಗಳನ್ನು ಒಡೆದು ಒಂದಾದ ಮೇಲೆ ಒಂದರಂತೆ ಸುಮಾರು 16 ಅಂಗಡಿಗಳಲ್ಲಿ ಕಳ್ಳತನವೆಸಗಿ ಸುಮಾರು 7 ಲಕ್ಷ ನಗದು ಹಣವನ್ನು ದೋಚಿದ್ದಾರೆ. ಕಳ್ಳತನ ಮಾಡುವ ದೃಶ್ಯಗಳೆಲ್ಲವೂ ಸಿ.ಸಿ. ಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.