ವಿವಿಧ ಬೇಡಿಕೆ ಮುಂದಿಟ್ಟು ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಎರಡು ದಿನಗಳ ಬಂದ್ ಗೆ ಮೊದಲ ದಿನದಂದು ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಶಾಲೆ-ಕಾಲೇಜಿಗೆ ಸರಕಾರವೇ ಮುಂಚಿತವಾಗಿ ರಜೆ ಘೋಷಣೆ ಮಾಡಿದ್ದರಿಂದ ಶಾಲೆಗಳು ಬಂದ್ ಇದ್ದವು. ಕೆಲವೇ ಕೆಲ ಶಾಲೆಗಳಲ್ಲಿ ಪಾಠ ನಡೆಯಿತು. ಸಾರಿಗೆ ಸಂಸ್ಥೆ ಬಸ್ ಸಂಚಾರ ವಿರಳಗೊಳಿಸಿದ್ದರಿಂದ ಜನಸಾಮಾನ್ಯರು ಪರದಾಡಬೇಕಾಯಿತು. ಜನರು ಅನಿವಾರ್ಯವಾಗಿ ಹೆಚ್ಚಿನ ಹಣ ನೀಡಿ ಇತರ ವಾಹನಗಳನ್ನು ಅವಲಂಬಿಸಬೇಕಾಯಿತು.
ವಾರದ ರಜೆಯ ಕಾರಣ ವ್ಯಾಪಾರ ವಹಿವಾಟು ಕಡಿಮೆಯಾಗಿತ್ತು. ಅಲ್ಲಲ್ಲಿ ಅಂಗಡಿ-ಮುಂಗಟ್ಟು ತೆರೆದಿಕೊಂಡಿದ್ದವು.
ಆಸ್ಪತ್ರೆ, ಖಾಸಗಿ ಸಂಘ ಸಂಸ್ಥೆಗಳು ಹಾಗೂ ಕೆಲ ಸರಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು.
ಸರಕಾರಿ ಕಚೇರಿಗಳಲ್ಲಿ ನೌಕರರ ಹಾಜರಾತಿ ಕಡಿಮೆ ಇತ್ತು. ಗ್ರಾಮೀಣ ಪ್ರದೇಶದಿಂದ ನಗರಕ್ಕೆ ತುರ್ತು ಕೆಲಸಕ್ಕಾಗಿ ಬಂದವರು ಪರದಾಡಿದರು. ಬೆಳಗಾವಿಯಲ್ಲಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ರವಾನಿಸಿದರು.