ಭಾರತ ಬಂದ್ ಹಿನ್ನೆಲೆಯಲ್ಲಿ ಬಸ್ ಸಂಚಾರ ಸ್ಥಗಿತಗೊಂಡ ಕಾರಣ ಪರದಾಡುತ್ತಿದ್ದ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಅವರ ಸ್ಥಳಗಳಿಗೆ ತಲುಪಿಸಿದ ಪೊಲೀಸ್ ಸಿಬ್ಬಂದಿ ಔದಾರ್ಯತೆ ಮೆರೆದ ಘಟನೆ ನಡೆದಿದೆ.
ಗದಗ ನಗರದಲ್ಲಿ ಈ ಚಿತ್ರಣ ಕಂಡು ಬಂದಿದೆ. ದೇಶಾದ್ಯಂತ ನಿನ್ನೆ ಮತ್ತು ಇಂದು ಕಾರ್ಮಿಕ ಸಂಘಟನೆಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಬಂದ್ ಘೋಷಿಸಿದ್ದರ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯಾದ್ಯಂತ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು.
ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಬೆಳ್ಳಂಬೆಳಗ್ಗೆ ಶಾಲೆ ಹಾಗೂ ಕಾಲೇಜುಗಳಿಗೆ ಹೋಗಲು ಸಿದ್ಧತೆಯಲ್ಲಿದ್ದ ವಿದ್ಯಾರ್ಥಿಗಳು ತಮ್ಮ ತಮ್ಮ ಸ್ಥಳಗಳನ್ನು ಮುಟ್ಟಲು ಎಲ್ಲೆಂದರಲ್ಲಿ ಪರದಾಡುತ್ತಿದ್ದರು.
ಇದನ್ನು ಗಮನಿಸಿದ ಗದಗ ಟೌನ್ ಪೊಲೀಸ್ ಠಾಣೆ ಹಾಗೂ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿಗಳು ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ತಮ್ಮ ವಾಹನಗಳಲ್ಲಿಯೇ ವಿದ್ಯಾರ್ಥಿಗಳನ್ನು ಶಾಲಾ, ಕಾಲೇಜುಗಳಿಗೆ ಕರೆದೊಯ್ದು ಅವರನ್ನು ಸುರಕ್ಷಿತವಾಗಿ ತಲುಪಿಸಿ ಔದಾರ್ಯತೆಯನ್ನು ಮೆರೆದಿದ್ದಾರೆ.