Publish Date: Wed, 05 Aug 2026 (10:28 IST)
Updated Date: Wed, 05 Aug 2026 (10:32 IST)
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟ ಪುನಾರಚನೆ ಹಾಗೂ ವಿಸ್ತರಣೆಯ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದೊಳಗೆ ಅಸಮಾಧಾನದ ಹೊಗೆಯಾಡಲು ಪ್ರಾರಂಭಿಸಿದೆ. ಸಚಿವ ಸ್ಥಾನ ವಂಚಿತರಾದ ಹಿರಿಯ ಹಾಗೂ ಪ್ರಭಾವಿ ಶಾಸಕರು ನಾಯಕತ್ವದ ವಿರುದ್ಧ ದಂಗೆಯೇಳುವ ಲಕ್ಷಣಗಳು ಕಂಡುಬರುತ್ತಿದ್ದು, ಶೀಘ್ರದಲ್ಲೇ ರಹಸ್ಯ ಸಭೆ ನಡೆಸಲು ಸಿದ್ಧತೆ ನಡೆಸಿದ್ದಾರೆ ಎಂದು ವರದಿಗಳು ತಿಳಿಸಿವೆ.
20ಕ್ಕೂ ಹೆಚ್ಚು ಶಾಸಕರ ರಹಸ್ಯ ಸಭೆ ಪ್ಲಾನ್
ಸಚಿವ ಸ್ಥಾನ ಸಿಗದೇ ತೀವ್ರ ನಿರಾಶೆಗೊಂಡಿರುವ ಸುಮಾರು 20ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಒಂದೆಡೆ ಸೇರಿ ಮುಂದಿನ ನಡೆ ಕುರಿತು ಚರ್ಚಿಸಲು ಪ್ರತ್ಯೇಕ ಹಾಗೂ ರಹಸ್ಯ ಸಭೆ ಆಯೋಜಿಸಲು ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.
ಹೈಕಮಾಂಡ್ ಭೇಟಿಗೆ ಸಿದ್ಧತೆ
ಅಸಮಾಧಾನಗೊಂಡಿರುವ ಶಾಸಕರ ಪೈಕಿ ಕೆಲವರು ನವದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಕೆ. ಸಿ. ವೇಣುಗೋಪಾಲ್ ಸೇರಿದಂತೆ ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ. ರಾಜ್ಯದಲ್ಲಿ ಸಚಿವ ಸ್ಥಾನ ಹಂಚಿಕೆಯಲ್ಲಿ ತಮಗೆ ಅನ್ಯಾಯವಾಗಿದೆ ಎಂದು ಹೈಕಮಾಂಡ್‌ಗೆ ದೂರು ನೀಡಲು ಇವರು ಸಿದ್ಧತೆ ನಡೆಸಿದ್ದಾರೆ.
ಸೀನಿಯಾರಿಟಿ ಮತ್ತು ಪ್ರಾಂತ್ಯವಾರು ಪ್ರಾತಿನಿಧ್ಯದ ಕೊರತೆ ದೂರು
ಹಲವು ಬಾರಿ ಗೆದ್ದು ಬಂದಿರುವ ಹಿರಿಯ ಶಾಸಕರನ್ನು ಕಡೆಗಣಿಸಿ ಹೊಸಬರಿಗೆ ಅಥವಾ ನಿರ್ದಿಷ್ಟ ವರ್ಗಗಳಿಗೆ ಮಾತ್ರ ಆದ್ಯತೆ ನೀಡಲಾಗಿದೆ ಎಂಬ ಆರೋಪಗಳು ಶಾಸಕರ ವಲಯದಲ್ಲಿ ಕೇಳಿಬರುತ್ತಿವೆ.
ಪಕ್ಷದಲ್ಲಿ ನಾಯಕತ್ವದ ವಿರುದ್ಧ ಶಾಸಕರು ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕುತ್ತಿರುವುದು ಸರ್ಕಾರಕ್ಕೆ ಹೊಸ ತಲೆನೋವಾಗಿ ಪರಿಣಮಿಸಿದೆ. ಪ್ರಮುಖವಾಗಿ ಹಿರಿಯ ನಾಯಕರನ್ನು ಸಮಾಧಾನಪಡಿಸಲು ಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ಅಧ್ಯಕ್ಷರು ಪ್ರಯತ್ನಿಸುತ್ತಿದ್ದರೂ, ಶಾಸಕರ ಈ ರಹಸ್ಯ ಸಭೆಯ ಸುದ್ದಿ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ