Publish Date: Mon, 03 Aug 2026 (16:37 IST)
Updated Date: Mon, 03 Aug 2026 (16:40 IST)
ಬೆಂಗಳೂರು: ನೂತನ ಸಚಿವರ ಪಟ್ಟಿ ಹೊರಬೀಳುತ್ತಿದ್ದಂತೇ ಕಾಂಗ್ರೆಸ್ ನಲ್ಲಿ ಸಚಿವ ಸ್ಥಾನ ವಂಚಿತರ ಅಸಮಾಧಾನ ಸ್ಪೋಟಗೊಂಡಿದೆ. ಸಚಿವರಾಗಲು ಮಾಜಿ ಮುಖ್ಯ ಮಂತ್ರಿಗಳ ಮಕ್ಕಳೇ ಆಗಬೇಕಾ ಎಂದು ಇಬ್ಬರು ಶಾಸಕರು ಈಗಾಗಲೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
ಸಚಿವ ಸ್ಥಾನ ತಪ್ಪಿದ್ದಕ್ಕೆ ಬೇಸರಗೊಂಡಿರುವ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಮತ್ತು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಇದು ರಾಜ್ಯ ಕಾಂಗ್ರೆಸ್ ಗೆ ಮತ್ತೊಂದು ತಲೆನೋವಾಗಿದೆ.
ಸಚಿವ ಸಂಪುಟ ವಿಸ್ತರಣೆಯಾಗುತ್ತದೆ ಎಂದಾಗ ಹಲವು ಶಾಸಕರು ಹೈಕಮಾಂಡ್ ಗೆ ತಮ್ಮ ಪರ ಲಾಬಿ ನಡೆಸಲು ಪ್ರಯತ್ನಿಸಿದ್ದರು. ಕೆಲವರು ಬಹಿರಂಗವಾಗಿಯೇ ನಮಗೆ ಸಚಿವ ಸ್ಥಾನ ಬೇಕು ಎಂದು ಕೇಳಿದ್ದರು. ಈ ಬಾರಿ ಹೊಸಬರಿಗೆ ಮಣೆ ಹಾಕಲಾಗುವುದು ಎಂಬ ಮಾತುಗಳಿತ್ತು.
ಆದರೆ ಮತ್ತೆ ಬಹುತೇಕ ಈ ಹಿಂದೆ ಸಚಿವರಾಗಿದ್ದವರಿಗೆ ಸ್ಥಾನ ನೀಡಲಾಗಿದೆ. ಇದು ಹೊಸದಾಗಿ ಸಚಿವ ಸ್ಥಾನ ಸಿಗಬಹುದು ಎಂದು ಕಾದಿದ್ದವರಿಗೆ ಅಸಮಾಧಾನ ತಂದಿದೆ. ಅದರಲ್ಲೂ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ನಾನು ನಾಳೆ 10 ಗಂಟೆಗೆ ನನ್ನ ಶಾಸಕ ಸ್ಥಾನ ಮತ್ತು ನಿಗಮ ಮಂಡಳಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಮೂರು ವರ್ಷ ಮಂತ್ರಿಯಾದವರಿಗೇ ಮತ್ತೆ ಅವಕಾಶ ಕೊಟ್ಟಿದ್ದಾರೆ. ಮಾಜಿ ಮುಖ್ಯಮಂತ್ರಿ ಮಕ್ಕಳು, ಮಂತ್ರಿಗಳ ಮಕ್ಕಳಿಗೇ ಸಚಿವ ಸ್ಥಾನ ಕೊಡಬೇಕಾ? ಹೊಸಬರಿಗೆ ಅವಕಾಶ ನೀಡುತ್ತೇವೆ ಎಂದಿದ್ದರು. ಇದೇನಾ ಹೊಸಬರಿಗೆ ಅವಕಾಶ ನೀಡಿರೋದು? ನನ್ನ ಜೊತೆ ಹಲವು ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ದಾರೆ. ಇದೀಗ ಕಾಂಗ್ರೆಸ್ ಭಿನ್ನಮತ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ