Publish Date: Tue, 04 Aug 2026 (14:01 IST)
Updated Date: Tue, 04 Aug 2026 (14:03 IST)
ಬೆಂಗಳೂರು: ಸಚಿವ ಸ್ಥಾನ ಕೊಡದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ ಎಂದು ಒತ್ತಡ ಹಾಕುತ್ತಿರುವವರಿಗೆ ಸಿಎಂ ಡಿಕೆ ಶಿವಕುಮಾರ್ ಶಾಕಿಂಗ್ ಹೇಳಿಕೆ ಮೂಲಕ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಹೈಕಮಾಂಡ್ ತೀರ್ಮಾನದಂತೆ ಈಗ ಸಚಿವರನ್ನು ನೇಮಿಸಲಾಗಿದೆ. ಆದರೆ ತಮಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಅನೇಕರು ಅಸಮಾಧಾನರಾಗಿದ್ದಾರೆ. ಕೆಲವು ಶಾಸಕರು ರಾಜೀನಾಮೆ ಕೊಡುತ್ತೇವೆ ಎಂದು ಒತ್ತಡ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಈ ನಡುವೆ ಹೈಕಮಾಂಡ್ ನಿಂದ ರಾಜೀನಾಮೆ ಕೊಡುತ್ತೇನೆ ಎಂದು ಬೆದರಿಕೆ ಹಾಕುತ್ತಿರುವವರ ಬಗ್ಗೆ ಡೋಂಟ್ ಕೇರ್ ಮಾಡುವಂತೆ ಸೂಚನೆ ಬಂದಿದೆ ಎನ್ನಲಾಗಿದೆ.
ಇದೇ ಕಾರಣಕ್ಕೆ ಸಿಎಂ ಇಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ. "ಯಾರಾದರೂ ಶಾಸಕರು ಅಸಮಾಧಾನಗೊಂಡು ರಾಜೀನಾಮೆ ನೀಡಲು ಬಯಸಿದರೆ, ಅದನ್ನು ಅಂಗೀಕರಿಸಲು ನನಗೆ ಎರಡು ನಿಮಿಷವೂ ಬೇಕಾಗಿಲ್ಲ" ಎಂದು ಅವರು ಖಡಕ್ ಸಂದೇಶ ರವಾನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, "ರಾಜಕೀಯದಲ್ಲಿ ರಾಜೀನಾಮೆಗಳು ಸಹಜ. ಅದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ರಾಜಕೀಯದಲ್ಲಿ ಉಳಿಯಲು ಬಯಸುವವರು ಪಕ್ಷದ ಜೊತೆಗೆ ನಿಲ್ಲಬೇಕು. ಏಕೆಂದರೆ ಪಕ್ಷವಿದ್ದರೆ ಮಾತ್ರ ಉಳಿದೆಲ್ಲ ಅಧಿಕಾರ ಮತ್ತು ಸ್ಥಾನಮಾನಗಳು" ಎಂದು ಸ್ಪಷ್ಟಪಡಿಸಿದರು.
ಧರ್ಮಸಿಂಗ್ ಹಾಗೂ ಸಿದ್ಧರಾಮಯ್ಯ ಅವರ ಸಚಿವ ಸಂಪುಟಗಳ ಅವಧಿಯಲ್ಲಿ ತಮಗೂ ಸಚಿವ ಸ್ಥಾನ ಸಿಕ್ಕಿರಲಿಲ್ಲ ಎಂಬುದನ್ನು ನೆನಪಿಸಿಕೊಂಡ ಶಿವಕುಮಾರ್, "ನನಗೂ ಸಚಿವ ಸ್ಥಾನ ಕೈತಪ್ಪಿದಾಗ ನಾನು ಎಂದಿಗೂ ಪಕ್ಷಕ್ಕೆ ಅಥವಾ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿಲ್ಲ. ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್ ಹಾಗೂ ಕುಮಾರ ಬಂಗಾರಪ್ಪ ಅವರಂತಹ ನಾಯಕರೂ ಸಹ ಆರಂಭದಲ್ಲಿ ಇಂತಹ ಹಿನ್ನಡೆಗಳನ್ನು ಎದುರಿಸಿ, ನಂತರ ದೊಡ್ಡ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದಾರೆ" ಎಂದು ಸಚಿವ ಸ್ಥಾನ ವಂಚಿತ ಶಾಸಕರಿಗೆ ಕಿವಿಮಾತು ಹೇಳಿದರು.
ಸಂಪುಟದಲ್ಲಿ ಜಾಗ ಸಿಗದ ಶಾಸಕರನ್ನು ಸಮಾಧಾನಪಡಿಸಲು ಯತ್ನಿಸಿದ ಸಿಎಂ, ಮುಂಬರುವ ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕಾತಿಯಲ್ಲಿ ಸೂಕ್ತ ಅರ್ಹತೆ ಹೊಂದಿರುವ ಶಾಸಕರಿಗೆ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ