ಕಾಫಿನಾಡಿನ ಮಲೆನಾಡು ಭಾಗದಲ್ಲಿ ಸುರಿಯುತ್ತಿರೋ ಸೋನೆ ಮಳೆ ಹಾಗೂ ರಣಗಾಳಿಗೆ ಅಲ್ಲಲ್ಲೆ ಬೆಟ್ಟ-ಗುಡ್ಡ ಹಾಗೂ ಭೂಮಿ ಕುಸಿಯುತ್ತಿವೆ. ಮಲೆನಾಡಿಗರು ಆತಂಕಕ್ಕೀಡಾಗಿದ್ದಾರೆ. ಎರಡ್ಮೂರು ದಿನದಿಂದ ಮಲೆನಾಡಿನಲ್ಲಿ ಮಳೆಯ ಪ್ರಮಾಣ ತಗ್ಗಿದ್ದು ಗಾಳಿಯ ವೇಗ ಹೆಚ್ಚಾಗಿದೆ.
ಎರಡು ತಿಂಗಳ ಕಾಲ ಸುರಿದ ಮಳೆಗೆ ಭೂಮಿಯ ತೇವಾಂಶ ಹೆಚ್ಚಾಗಿದ್ದು ಈಗಿನ ದೈತ್ಯ ಗಾಳಿಯಿಂದ ಭೂಕುಸಿತದ ಪ್ರಕರಣ ಹೆಚ್ಚಾಗಿವೆ. ಎನ್.ಆರ್.ಪುರ ತಾಲೂಕಿನ ಖಾಂಡ್ಯ ಹೋಬಳಿಯ ಬಿದರು, ಮೇಲ್ ಪಲ್ ಗ್ರಾಮದಲ್ಲಿ ಹಳಸೆ ಶಿವಣ್ಣ , ಸತೀಶ್ ಭಟ್ ಎಂಬುವರಿಗೆ ಸೇರಿದ ಕಾಫಿ ತೋಟದಲ್ಲಿ ಸುಮಾರು ಒಂದು ಎಕರೆಯಷ್ಟು ಭೂಮಿ ಕುಸಿತವಾಗಿದೆ. ಕುಸಿದಿರೋ ಮಣ್ಣು ತೋಟದ ಇತರೇ ಭಾಗದ ಮೇಲೆ ಅಪ್ಪಳಿಸಿರೋದ್ರಿಂದ ಒಂದೂವರೆ-ಎರಡು ಎಕರೆಯಲ್ಲಿನ ಕಾಫಿ, ಅಡಿಕೆ, ಮೆಣಸು ಬೆಳೆ ಸಂಪೂರ್ಣ ನಾಶವಾಗಿದೆ. ಭೂಮಿ ಹಸಿ ಇರೋ ಕಾರಣ ಮಣ್ಣು ಕುಸಿಯುತ್ತಲೇ ಇದ್ದು, ರೈತರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಗಡಿಗ್ರಾಮವಾದ ಸಿದ್ದಾಪುರ ಗ್ರಾಮದಲ್ಲೂ ಸುಮಾರು ಒಂದು ಎಕರೆಯಷ್ಟು ಭೂಮಿ ಕುಸಿದಿದ್ದು, ಅಲ್ಲೂ ಸಹಾ ಅಡಿಕೆ, ಕಾಫಿ ಸಂಪೂರ್ಣ ನಾಶವಾಗಿತ್ತು. ಅಷ್ಟೆ ಅಲ್ಲದೆ ಬೊಗಸೆ ದೊಡ್ಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಭೂ ಕುಸಿತವಾಗಿದೆ.
ಮಲೆನಾಡಿನಾದ್ಯಂತ ಕೆಲವೆಡೆ ರಸ್ತೆ ಕುಸಿಯುತ್ತಿದ್ದು, ಹಲವು ಗ್ರಾಮಗಳಿಗೆ ದಾರಿ ಇಲ್ಲದಂತಾಗಿದೆ. ಬೆಟ್ಟ-ಗುಡ್ಡಗಳ ಮಣ್ಣು ಭೂಮಿಗೆ ಕುಸಿಯುತ್ತಿದ್ದು, ಸಂಚಾರ ಕೂಡ ಅಸ್ತವ್ಯಸ್ತವಾಗ್ತಿದೆ. ಮಳೆ ಹಾಗೂ ರಣಗಾಳಿಯಿಂದ ಮಲೆನಾಡಿಗರು ಬೆಚ್ಚಿಬಿದ್ದಿದ್ದಾರೆ.