Publish Date: Sat, 07 Aug 2021 (15:00 IST)
Updated Date: Sat, 07 Aug 2021 (15:02 IST)
ಖಾತೆ ಹಂಚಿಕೆ ಬೆನ್ನಲ್ಲೇ ಅಸಮಾಧಾನ ಹೊರಹಾಕಿದ ಆನಂದ್ ಸಿಂಗ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.
ಬಳ್ಳಾರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕೇಳಿರೋದೇ ಒಂದು ಕೊಟ್ಟಿರೋದೇ ಒಂದು. ಬದಲಾವಣೆ ಮಾಡಬೇಕೆಂದು ಯಡಿಯೂರಪ್ಪ ಮತ್ತು ಬೊಮ್ಮಯಿ ಅವರಿಗೆ ಕೇಳಿದ್ದೆ. ಕೇಳಿದ ಖಾತೆ ಕೊಡದೇ ಇದ್ದರೆ ಶಾಸಕನಾಗಿ ಉಳಿಯೋದೇ ಒಳಿತು ಎನ್ನುವದು ನನ್ನ ನಿಲುವು ಎಂದರು.
ಬಿಜೆಪಿ ಸರ್ಕಾರ ಬರಲು ಮೊದಲು ರಾಜೀನಾಮೆ ನೀಡಿದ್ದು ನಾನು. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಮೇ ಒಂದನೇ ತಾರೀಖು ಮೊದಲು ನಾನು ರಾಜೀನಾಮೆ ನೀಡಿದ್ದು. ಹಾಗಂತ ನನ್ನಿಂದಲೇ ಸರ್ಕಾರ ಬಂದಿದೆ ಅಂತ ಹೇಳಲ್ಲ. ನನ್ನಂತೆ ಹಲವು ಜನರು ರಾಜೀನಾಮೆ ನೀಡಿದ ಬಳಿಕ ಸರ್ಕಾರ ರಚನೆ ಯಾಗಿದೆ ಎಂದು ಅವರು ಹೇಳಿದರು.
ಯಡಿಯೂರಪ್ಪ ಸರ್ಕಾರದ ವೇಳೆಯೂ ಎರಡು ದಿನದಲ್ಲಿ ಮೂರು ಖಾತೆ ಬದಲಾಯಿಸಿದರು. ಇದು ಅವಮಾನ ಅಲ್ಲ ಆದರೆ ನಿರಾಸೆ ಮಾಡಿರುವುದಕ್ಕೆ ಸಾಕಷ್ಟು ಬೇಸರವಾಗಿದೆ. ಮತ್ತೊಮ್ಮೆ ಸಿಎಂಗೆ ಮನವಿ ಮಾಡುವೆ ಕೊಡದಿದ್ರೇ ನನ್ನ ದಾರಿ ನಾನು ನೋಡಿಕೊಳ್ಳುವೆ ಎಂದು ಆನಂದ್ ಸಿಂಗ್ ಬೇಸರ ವ್ಯಕ್ತಪಡಿಸಿದರು.