Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೃಷಿ ಕ್ಷೇತ್ರದ ಪ್ರಮುಖ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ರಾಷ್ಟ್ರೀಯ ‘ಅಗ್ರಿಕಲ್ಚರಲ್ ಗ್ರ್ಯಾಂಡ್ ಚಾಲೆಂಜಸ್’ ಸ್ಪರ್ಧೆ

ಕೃಷಿ ಕ್ಷೇತ್ರದ ಪ್ರಮುಖ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ರಾಷ್ಟ್ರೀಯ ‘ಅಗ್ರಿಕಲ್ಚರಲ್ ಗ್ರ್ಯಾಂಡ್ ಚಾಲೆಂಜಸ್’ ಸ್ಪರ್ಧೆ
bangalore , ಶುಕ್ರವಾರ, 23 ಜುಲೈ 2021 (20:13 IST)
ಬೆಂಗಳೂರು: ದೇಶದ ಮುಂಚೂಣಿ ಜೈವಿಕ ವಿಜ್ಞಾನಗಳ ತಾಂತ್ರಿಕತೆ ಹಾಗೂ ನಾವೀನ್ಯತಾ ಕೇಂದ್ರವಾದ ಸಿ-ಕ್ಯಾಂಪ್ (ಸೆಂಟರ್ ಫಾರ್ ಸೆಲ್ಯುಲರ್ ಅಂಡ್ ಮಾಲಿಕ್ಯುಲರ್ ಪ್ಲ್ಯಾಟ್ ಫಾರ್ಮ್ಸ್) ಸಂಸ್ಥೆಯು ಕೃಷಿ ಕ್ಷೇತ್ರದ ಪ್ರಮುಖ ಸವಾಲುಗಳಿಗೆ ನಾವೀನ್ಯತಾ ಪರಿಹಾರಗಳನ್ನು ಉತ್ತೇಜಿಸಲು ಮೊತ್ತಮೊದಲ ಬಾರಿಗೆ ರಾಷ್ಟ್ರಮಟ್ಟದ ‘ಅಗ್ರಿಕಲ್ಚರಲ್ ಗ್ರ್ಯಾಂಡ್ ಚಾಲೆಂಜಸ್’ ಸ್ಪರ್ಧೆಯನ್ನು ಪ್ರಕಟಿಸಿದೆ. 
 
ಕೃಷಿ ತಾಂತ್ರಿಕತೆಗಾಗಿ ಇರುವ ರಾಜ್ಯದ ಕೆ-ಟೆಕ್ ಉತ್ಕೃಷ್ಠತಾ ಕೇಂದ್ರವು ಕೃಷಿ ಇಲಾಖೆ ಹಾಗೂ ಐಟಿ/ಬಿಟಿ ಮತ್ತು ವಿಜ್ಞಾನ & ತಂತ್ರಜ್ಞಾನ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಲಾಗಿರುವ ಈ ಸ್ಪರ್ಧೆ ಕುರಿತು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ಶುಕ್ರವಾರ ಪ್ರಕಟಿಸಿದರು. 
 
ಸಿ- ಕ್ಯಾಂಪ್ ನಲ್ಲಿ ಈ ಸ್ಪರ್ಧೆ ಕುರಿತು ಮಾತನಾಡಿದ ಡಿಸಿಎಂ ಅಶ್ವತ್ಥ ನಾರಾಯಣ ಅವರು, ನವೋದ್ಯಮಿಗಳನ್ನು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಉತ್ತೇಜಿಸುವ ಮೂಲಕ ಕೃಷಿ ವಲಯದಲ್ಲಿ ಆರ್ಥಿಕ ಕಾರ್ಯಸಾಧುವಾದ, ಪರಿಹಾರ ಕೇಂದ್ರಿತವಾದ, ಅತ್ಯಾಧುನಿಕ ವಿಜ್ಞಾನ ಹಾಗೂ ತಾಂತ್ರಿಕತೆ ಆಧಾರಿತ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸಲಾಗುತ್ತದೆ ಎಂದರು. 
 
ದೇಶದ ಕೃಷಿ ವಲಯದ ಪ್ರಮುಖ ಬಿಕ್ಕಟ್ಟುಗಳಿಗೆ ಆಧುನಿಕ ತಂತ್ರಜ್ಞಾನ ಬಳಸಿ ನಾವೀನ್ಯತಾ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಈ ಸ್ಪರ್ಧೆ ಗುರಿ ನೀಡುತ್ತದೆ. ಇದರಲ್ಲಿ ಗೆಲುವು ಕಂಡವರಿಗೆ ನವೋದ್ಯಮಕ್ಕಾಗಿ ರೂ 25 ಲಕ್ಷದವರೆಗೆ ಅನುದಾನ ನೀಡುವ ಜೊತೆಗೆ ಸಿ-ಕ್ಯಾಂಪ್ ವತಿಯಿಂದ ಪರಿಪೋಷಕತ್ವ ಹಾಗೂ ಮಾರ್ಗದರ್ಶನ ಸೌಲಭ್ಯ ಒದಗಿಸಲಾಗುತ್ತದೆ ಎಂದು ಅಶ್ವತ್ಥ ನಾರಾಯಣ ವಿವರಿಸಿದರು. 
 
ನವೋದ್ಯಮ ಸಹಭಾಗಿತ್ವಕ್ಕಾಗಿ ‘ಇಂಡೋ-ಇಸ್ರೇಲ್ ಇನ್ನೊವೇಷನ್ ಬ್ರಿಜ್’ ಒಡಂಬಡಿಕೆ 
 
ಇದೇ ಸಂದರ್ಭದಲ್ಲಿ ‘ಇಂಡೋ-ಇಸ್ರೇಲ್ ಇನ್ನೊವೇಷನ್ ಬ್ರಿಜ್’ ಗಾಗಿ ಪರಸ್ಪರ ತಿಳಿವಳಿಕೆ ಒಪ್ಪಂದ (ಎಂಒಯು) ಏರ್ಪಟ್ಟಿತು. ಎರಡೂ ದೇಶಗಳ, ಜೀವವಿಜ್ಞಾನಗಳು ಮತ್ತು ಕೃಷಿ ತಾಂತ್ರಿಕತೆ ಕ್ಷೇತ್ರದ ನವೋದ್ಯಮಗಳ ನಡುವೆ ಸಹಭಾಗಿತ್ವ ಹೆಚ್ಚಿಸುವ ಉದ್ದೇಶವನ್ನು ಇದು ಹೊಂದಿದೆ. 
 
ದಕ್ಷಿಣ ಭಾರತದ ಇಸ್ರೇಲ್ ಕಾನ್ಸುಲ್ ಜನರಲ್ ಡಾ.ಜೊನಾಥನ್ ಜಡ್ಕಾ ಮಾತನಾಡಿ, “ಈ ಒಡಂಬಡಿಕೆಯಿಂದಾಗಿ ಎರಡೂ ದೇಶಗಳ ನವೋದ್ಯಮಗಳ ನಡುವೆ ಸಹಕಾರ ಹೆಚ್ಚಾಗಲಿದೆ. ಇದು, ಪರಸ್ಪರ ದೇಶಗಳ ಪರಿಣತ ವಲಯಗಳನ್ನು ಒಂದೇ ವೇದಿಕೆಯಡಿ ತಂದು ಆಧುನಿಕ ಸಂಶೋಧನೆ ಮತ್ತು ಅಭಿವೃದ್ಧಿಗೆ ಸಹಭಾಗಿತ್ವದ ವಾತಾವರಣವನ್ನು ರೂಪಿಸುತ್ತದೆ” ಎಂದರು. 
 
ಇದೇ ಸಂದರ್ಭದಲ್ಲಿ, ಸಿ-ಕ್ಯಾಂಪ್ ನೆರವಿನಿಂದ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಕೋವಿಡ್-19 ಲಸಿಕೆಯನ್ನು ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದಾದ ಕೋಲ್ಡ್ ಚೈನ್ ತಾಂತ್ರಿಕತೆಯ ಬಾಕ್ಸ್ ಅನ್ನು ಸರ್ಕಾರಕ್ಕೆ ಹಸ್ತಾಂತರಿಸಲಾಯಿತು. 
 
ಎನ್ ಸಿಬಿಎಸ್ ನಿರ್ದೇಶಕ ಪ್ರೊ.ಸತ್ಯಜಿತ್ ಮೇಯರ್, ಇನ್ ಸ್ಟೆಮ್ ನಿರ್ದೇಶಕ ಪ್ರೊ.ಅಪೂರ್ವ ಸರಿನ್, ಐಟಿ/ಬಿಟಿ ಇಲಾಖೆ ನಿರ್ದೇಶಕರಾದ ಮೀನಾ ನಾಗರಾಜ್, ಸಿ-ಕ್ಯಾಂಪ್‌ ಸಿಇಒ ಮತ್ತು ನಿರ್ದೇಶಕ ತಸ್ಲೀಂ ಆರೀಫ್‌ ಸಯ್ಯದ್‌ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು. 
 
‘ಅಗ್ರಿ ಗ್ರ್ಯಾಂಡ್ ಚಾಲೆಂಡ್-21’ ಸ್ಪರ್ಧೆಗೆ ನಿಗದಿ ಮಾಡಲಾಗಿರುವ ಕೃಷಿ ಕ್ಷೇತ್ರದ ಮೂರು ಸವಾಲುಗಳು ಹೀಗಿವೆ: 
 
•ಮಣ್ಣು ಮತ್ತು/ಅಥವಾ ಸಸ್ಯ ಅಂಗಾಂಶದಲ್ಲಿ ಸ್ಥೂಲ/ಸೂಕ್ಷ್ಮ ಪೌಷ್ಟಿಕಾಂಶಗಳ ಸಾಂದ್ರತೆಯನ್ನು ಕ್ಷಿಪ್ರವಾಗಿ, ನಿಖರವಾಗಿ ಹಾಗೂ ಕಡಿಮೆ ದರದಲ್ಲಿ ಪರೀಕ್ಷಿಸಬಲ್ಲ ಪರಿಕಲ್ಪನೆಯ ಪುರಾವೆ (ಪಿಒಸಿ)
•ರಾಸಾಯನಿಕ/ಜೈವಿಕ/ಐ.ಆರ್. (ಅವಗೆಂಪು ತಾಂತ್ರಿಕತೆ) ವಿಧಾನಗಳ ಮೂಲಕ ಕೃಷಿ ಉತ್ಪನ್ನಗಳ ಬಾಳಿಕೆ ಅವಧಿ ಹೆಚ್ಚಿಸುವುದು ಹಾಗೂ ಕಟಾವಿನ ನಂತರ ನಷ್ಟದ ಪ್ರಮಾಣವನ್ನು ಕನಿಷ್ಠ ಮಟ್ಟಕ್ಕೆ ತಗ್ಗಿಸುವುದು. 
 
•ಕಾಫಿ ಗಿಡಗಳಿಗೆ ತಗುಲುವ ಬಿಳಿ ಕಾಂಡಕೊರಕಗಳ ಪ್ರಸರಣವನ್ನು ಪತ್ತೆಹಚ್ಚುವ ಜೊತೆಗೆ ಅದನ್ನು ಉಪಚರಿಸಲು ತಾಂತ್ರಿಕತೆ

Share this Story:

Follow Webdunia kannada

ಮುಂದಿನ ಸುದ್ದಿ

ಪಿಯುಸಿ ಮಾದರಿಯಲ್ಲೇ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಪರೀಕ್ಷೆ ರದ್ದು