ಬೆಂಗಳೂರು:ಸಾರಿಗೆ ನೌಕರರಿಗೆ ಒಂದಲ್ಲ ಒಂದು ರೀತಿಯಲ್ಲಿ ಸಂಕಷ್ಟ ತಪ್ಪುತ್ತಿಲ್ಲ. ಮುಷ್ಕರದಲ್ಲಿ ಭಾಗವಹಿಸಿದ್ದ 1970 ಮಂದಿ ನೌಕರರನ್ನು ವಜಾ ಮಾಡಲಾಗಿದ್ದು, ಅವರು ಅತಂತ್ರ ಸ್ಥಿತಿ ಎದುರಿಸುತ್ತಿದ್ದಾರೆ.
ಆರನೇ ವೇತನ ಜಾರಿ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೆಎಸ್ಆರ್ ಟಿಸಿ, ಬಿಎಂಟಿಸಿ, ಎನ್ ಡಬ್ಲ್ಯೂ ಆರ್ ಟಿಸಿ, ಎನ್ ಇ ಆರ್ ಟಿಸಿ ನಿಗಮದ ಸಾವಿರಾರು ನೌಕರರು ಏ.8 ರಿಂದ ಏ. 20 ರವರೆಗೆ ಕರ್ತವ್ಯಕ್ಕೆ ಹಾಜರಾಗದೇ ಮುಷ್ಕರ ನಡೆಸಿದ್ದರು. ಸರ್ಕಾರ ಎಷ್ಟೇ ಮನವೊಲಿಸಿದರೂ, ಜಗ್ಗದೇ ಮುಷ್ಕರ ನಡೆಸಿದ್ದರು. ಈ ವೇಳೆ ತರಬೇತಿ ಹಾಗೂ ಕಾಯಂ ನೌಕರರನ್ನು ಅಮಾನತು, ವಜಾ ಮಾಡಲಾಗಿತ್ತು.
ಏ. 27 ರಿಂದ ಜನತಾ ಕಫ್ರ್ಯೂ ಜಾರಿಯಾಗಿದ್ದು, ಜೂನ್ ಅಂತ್ಯವರೆಗೂ ಸಂಚಾರ ನಡೆಸಲಿಲ್ಲ. ಆನ್ ಲಾಕ್ ಬಳಿಕ ಹಂತ ಹಂತವಾಗಿ ಸಂಚಾರ ಆರಂಭವಾಗಿದ್ದು, ವಜಾಗೊಂಡ ನೌಕರರು ಮಾತ್ರ ಕರ್ತವ್ಯ ಕ್ಕೆ ಹಾಜರಾಗದೇ ಮೇಲ್ಮನವಿ ಪ್ರಾಧಿಕಾರದ ಮೆಟ್ಟಿಲೇರಿದ್ದಾರೆ.
ಮುಷ್ಕರ ಹಿನ್ನೆಲೆ 2941 ನೌಕರರು ಅಮಾನತು ಗೊಂಡಿದ್ದು, ಇದರಲ್ಲಿ ಶೇ. 90 ರಷ್ಟು ನೌಕರರಿಗೆ ಕರ್ತವ್ಯ ಕ್ಕೆ ಹಾಜರಾಗಲು ಅನುಮತಿ ನೀಡಲಾಗಿದೆ. ಆದರೆ, ವಜಾಗೊಂಡ ನೌಕರರು ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಹಾಕಿದ್ದಾರೆ. ಪ್ರಾಧಿಕಾರ ಅನುಮತಿ ನೀಡಿದರಷ್ಟೇ ಕೆಲಸಕ್ಕೆ ಹಾಜರಾಗಬೇಕಾದ ಸ್ಥಿತಿ ಎದುರಾಗಿದೆ.
ತರಬೇತಿ ಹಾಗೂ ಪ್ರಬೇಷನರಿ ನೌಕರರಿಗೆ ಮತ್ತಷ್ಟು ಸಂಕಷ್ಟ: ಕಾನೂನು ಹೋರಾಟ ಮಾಡಿದರೆ, ಕಾಯಂ ನೌಕರರು ಕರ್ತವ್ಯ ಕ್ಕೆ ಹಾಜರಾಗುವ ಸಾಧ್ಯತೆ ಇದೆ. ಆದರೆ, ತರಬೇತಿ ಹಾಗೂ ಪ್ರಬೇಷನರಿ ಅವಧಿಯಲ್ಲಿ ಕೆಲಸ ನಿರ್ವಹಣೆ ಮಾಡುವ ನೌಕರರಿಗೆ ಕಾನೂನು ತೊಡಕುಗಳು ಹೆಚ್ಚಿವೆ. ಕಾನೂನು ಹೋರಾಟ ನಡೆಸಿದರೂ, ಅವರು ಪುನಃ ಕರ್ತವ್ಯ ಕ್ಕೆ ಹಾಜರಾಗುವುದು ಕಷ್ಟವಿದೆ. ಮೇಲ್ಮನವಿ ಪ್ರಾಧಿಕಾರದಲ್ಲಿ ಅರ್ಜಿ ತಿರಸ್ಕೃತ ಗೊಂಡರೂ, ಹೈ ಕೋಟ್೯ ಗೆ ಹೋಗಬೇಕಾಗುತ್ತದೆ. ಎಷ್ಟಾದರೂ ಕಾನೂನು ಹೋರಾಟ ಮಾಡಿದರೂ ಅವಕಾಶಗಳು ಕಡಿಮೆ ಇದೆ ಎನ್ನಲಾಗಿದೆ.
ಸಾವಿರ ಕೋಟಿ ರೂ.ಗೂ ಅಧಿಕ ನಷ್ಟ: ಮುಷ್ಕರದ ವೇಳೆ ಕೆಎಸ್ಆರ್ ಟಿಸಿ, ಬಿಎಂಟಿಸಿ ಸೇರಿ ನಾಲ್ಕೂ ನಿಗಮಗಳಿಗೆ ಪ್ರತಿದಿನ 17 ಕೋಟಿ ರೂ. ಆದಾಯ ನಷ್ಟ ಉಂಟಾಗಿದೆ. ಏ. 8 ರಿಂದ ಜೂನ್ ಅಂತ್ಯದ ವರೆಗೆ ಸಾವಿರಾರು ಕೋಟಿ ರೂ. ನಷ್ಟ ಸಂಭವಿಸಿದೆ.