ಮೈಸೂರು: ನಾಡಹಬ್ಬ ದಸರಾ ಸಂಭ್ರಮ ಕಳೆಗಟ್ಟಿದ್ದು, ಮೈಸೂರು ಅರಮನೆ ಮುಂಭಾಗ ಜಂಬೂ ಸವಾರಿ ವೀಕ್ಷಿಸಲು ಸಾಕಷ್ಟು ಜನ ಸೇರಿದ್ದಾರೆ. ಆದರೆ ಜಂಬೂ ಸವಾರಿಗೆ ಈ ಬಾರಿ ಮಳೆ ಕಾಟ ಎದುರಾಗಿದೆ.
ರಾಜ್ಯಾದ್ಯಂತ ಮಳೆಯಾಗುತ್ತಿದ್ದು, ಇಂದು ಮೈಸೂರಿನಲ್ಲಿ ಜಂಬೂ ಸವಾರಿ, ಸ್ತಬ್ಧ ಚಿತ್ರ ಪ್ರದರ್ಶನ ಮಳೆಯ ನಡುವೆಯೇ ನಡೆಯುತ್ತಿದೆ. ಸ್ತಬ್ಧ ಚಿತ್ರ ವೀಕ್ಷಿಸಲು ಸಾಕಷ್ಟು ಜನ ಸೇರಿದ್ದರು. ಆದರೆ ಮಳೆಯಿಂದಾಗಿ ಎಂದಿನಂತೆ ಸುಗಮವಾಗಿ ವೀಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ.
ಕೈಗೆ ಸಿಕ್ಕ ಕುರ್ಚಿ, ವಸ್ತುಗಳನ್ನು ತಲೆಮೇಲೆ ಇಟ್ಟುಕೊಂಡು ಸ್ತಬ್ಧ ಚಿತ್ರ ಪ್ರದರ್ಶನ ವೀಕ್ಷಿಸುತ್ತಿದ್ದಾರೆ. ಇನ್ನು, ಮಳೆಯ ಕಾರಣಕ್ಕೆ ಬೇಗ ಬೇಗನೇ ಒಂದೊಂದು ಜಿಲ್ಲೆಯ ಸ್ತಬ್ಧ ಚಿತ್ರ ಸಾಗುತ್ತಿದೆ. ವಿವಿಧ ಜಿಲ್ಲೆಗಳನ್ನು ಪ್ರತಿನಿಧಿಸುವ ಮತ್ತು ಕನ್ನಡ ನಾಡಿನ ವಿವಿಧ ಸಂಸ್ಕೃತಿಯನ್ನು ಬಿಂಬಿಸುವ ಕಲಾಕೃತಿಗಳ ಸ್ತಬ್ಧ ಚಿತ್ರ ಪ್ರದರ್ಶನ ನಡೆಯುತ್ತಿದೆ.
ಇದಕ್ಕೂ ಮುನ್ನ ಇಂದು ಅರಮನೆಯಲ್ಲಿ ಸಾಂಪ್ರದಾಯಿಕವಾಗಿ ಆಯುಧ ಪೂಜೆ ನೆರವೇರಿತು. ರಾಜ ಯದುವೀರ್ ಒಡೆಯರ್ ರಾಜ ಪೋಷಾಕಿನಲ್ಲಿ ಪಟ್ಟದ ಕತ್ತಿ ಹಿಡಿದು ಆಯುಧ ಪೂಜೆ ನೆರವೇರಿಸಲು ಬಂದರು. ಜಂಬೂ ಸವಾರಿಯೊಂದಿಗೆ ನಾಡ ಹಬ್ಬಕ್ಕೆ ತೆರೆ ಬೀಳಲಿದೆ.