ಮೈಸೂರು: ನಾಡಹಬ್ಬ ದಸರಾ ಸಂಭ್ರಮದಲ್ಲಿರುವಾಗ ತಮಿಳುನಾಡಿನಲ್ಲಿ ಮೈಸೂರು, ದರ್ಭಾಂಗ್ ಎಕ್ಸ್ ಪ್ರೆಸ್ ರೈಲು ಢಿಕ್ಕಿಯಾಗಿ ಭಾರೀ ಅನಾಹುತ ಸಂಭವಿಸುವುದರಲ್ಲಿತ್ತು. ಆದರೆ ಅದನ್ನು ದೇವಿಯೇ ರಕ್ಷಿಸಿದಳು ಎಂದು ರೈಲ್ವೇ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ಹೇಳಿದ್ದಾರೆ.
ನಿನ್ನೆ ರಾತ್ರಿ ತಮಿಳುನಾಡಿನ ತಿರುವಳ್ಳೂರು ಬಳಿ ಮೈಸೂರ-ದರ್ಭಾಂಗ ಎಕ್ಸ್ ಪ್ರೆಸ್ ರೈಲು ಗೂಡ್ಸ್ ರೈಲಿಗೆ ಢಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ರೈಲು ಭೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆದರೆ ಅದೃಷ್ಟವಶಾತ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ ಪ್ರಯಾಣಿಕರೂ ಪ್ರಾಣಾಪಾಯದಿಂದ ರಕ್ಷಿಸಿಕೊಂಡಿದ್ದಾರೆ.
ಆದರೆ ರೈಲಿನಲ್ಲಿ ಸಂಚಿಸುತ್ತಿದ್ದ 19 ಮಂದಿ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಪಘಾತ ನಡೆದ ಸ್ಥಳಕ್ಕೆ ಶ್ವಾನ ದಳ ಬಂದು ಯಾರಿಗಾದರೂ ಅಪಾಯವಾಗಿದೆಯೇ ಎಂದು ಪರಿಶೀಲನೆ ನಡೆಸಲಾಯಿತು.
ಇನ್ನು, ಅಪಘಾತದ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ವಿ ಸೋಮಣ್ಣ , ನಿನ್ನೆ ಒಳ್ಳೆಯ ದಿನ. ಆ ದೇವಿಯ ಕೃಪೆಯಿಂದ ಯಾರಿಗೂ ಪ್ರಾಣಾಪಾಯವಾಗಿಲ್ಲ ಎಂದರು. ಆದರೆ ಯಾವ ಕಾರಣಕ್ಕೆ ಅಪಘಾತವಾಯಿತು ಎಂಬುದನ್ನು ತನಿಖೆಯಿಂದ ಪತ್ತೆ ಹಚ್ಚಬೇಕಿದೆ. ತಕ್ಷಣವೇ ಅಗ್ನಿಶಾಮಕ ದಳ ಧಾವಿಸಿ ಬೆಂಕಿ ನಂದಿಸಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ.