ಬಳ್ಳಾರಿ: ಟಿಪ್ಪು ಜಯಂತಿ ವಿಷಯದಲ್ಲಿ ಅನಗತ್ಯ ಪೈಪೋಟಿ ನಡೆಯುತ್ತಿದೆ. ಈ ವಿಷಯದಲ್ಲಿ ಬಿಜೆಪಿಯವರು ಅನಗತ್ಯ ಅತಿರೇಕಕ್ಕೆ ಹೋಗಬಾರದು. ಟಿಪ್ಪು ಜಯಂತಿ ಬಗ್ಗೆ ಪರ, ವಿರೋಧ ಚರ್ಚೆ ಅಗತ್ಯವಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಹೂವಿನಹಡಗಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಮರ ಓಟು ನನಗೆ ಬೇಕಾಗಿಲ್ಲ ಎಂದು ಹೇಳುವುದು ಸರಿಯಲ್ಲ. ಇದು ಪ್ರಜಾಪ್ರಭುತ್ವ ವಿರೋಧಿ ಹೇಳಿಕೆಯಾಗುತ್ತದೆ. ಹಾಗಾದ್ರೆ ಮುಸ್ಲಿಂ, ಕ್ರೈಸ್ತರನ್ನು ಎಲ್ಲಿಗೆ ಕಳುಹಿಸುತ್ತೀರಿ? 2ನೇ ಪಾಕಿಸ್ತಾನ ಹುಟ್ಟು ಹಾಕೋಕೆ ಆಗುತ್ತಾ? ಎಂದು ದೇವೇಗೌಡ ಪ್ರಶ್ನಿಸಿದ್ದಾರೆ.
ಮಹದಾಯಿ ವಿಚಾರವಾಗಿ ಪ್ರಧಾನಿ ಬಳಿ ನಾನು ಮಾತನಾಡಿದ್ದೇನೆ. ಆದರೆ ಪ್ರಧಾನಿ ನರೇಂದ್ರ ಮೋದಿ ಕಣ್ಣಿದ್ದು ಕುರುಡರಾಗಿ, ಕಿವಿ ಇದ್ದು ಕಿವುಡರಾಗಿದ್ದಾರೆ. ಅದಕ್ಕೆ ನಾವೇನೂ ಮಾಡಲಿಕ್ಕಾಗುವುದಿಲ್ಲ. ಹೀಗಾಗಿ ಎರಡೂ ರಾಷ್ಟ್ರೀಯ ಪಕ್ಷಗಳಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದರು.